ಲಕ್ಷ್ಮೇಶ್ವರ: ಸಮಾಜದ ಆಭಿವೃದ್ಧಿ, ಸಮ ಸಮಾಜ, ಶೋಷಣೆ ರಹಿತ ಸಮಾಜಗಳ ಬಗ್ಗೆಯೇ ಸದಾ ಚಿಂತನೆ ನಡೆಸುತ್ತಿದ್ದ 12ನೇ ಶತಮಾನದ ಶರಣರ ತತ್ವ, ಚಿಂತನೆಗಳು ಸಾರ್ವಕಾಲಿಕವಾಗಿವೆ. ಸಮಾಜದಲ್ಲಿದ್ದ ಅಸಮಾನತೆ ದೂರಮಾಡಲು ಇಡೀ ವ್ಯವಸ್ಥೆಯನ್ನು ತಮ್ಮ ವಚನಗಳ ಮೂಲಕ ಪ್ರಶ್ನಿಸುವ ಮಹತ್ಕಾರ್ಯ ಮಾಡಿದರು ಎಂದು ಕೇಂದ್ರದ ಮಾಜಿ ಸಚಿವ ಡಾ. ಬಸವರಾಜ ಪಾಟೀಲ ಸೇಡಂ ಹೇಳಿದರು.
ಪಟ್ಟಣದ ಸ್ಕೂಲ್‌ಚಂದನದಲ್ಲಿ ಗುರುವಾರ ಆಯೋಜಿಸಿದ್ದ ‘ಭವಿಷ್ಯತ್ತಿನ ಭಾರತದ ಯುವಕರಿಗಾಗಿ 12ನೇ ಶತಮಾನದ ಶರಣ ಶರಣೆಯರ ವಚನ ವಿಸ್ತೃತ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
ವಚನಕಾರರು ಯಾವುದೇ ಜಾತಿ, ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ಎಲ್ಲವನ್ನೂ ಮೀರಿದವರು. ಸಮಾಜದ ಪರಿವರ್ತನೆಗೆ ಅವರ ವಚನಗಳು ದಿವ್ಯ ಔಷಧಿಯಾಗಿವೆ. ಇದನ್ನು ಅರಿಯಬೇಕಾದರೆ ಎಲ್ಲ ಶರಣ, ಶರಣೆಯರ ವಚನಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ದಾರಿದೀಪವಾಗಿ ಅಳವಡಿಸಿಕೊಳ್ಳಬೇಕು ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಶರಣರು 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದರು. ಎಲ್ಲರನ್ನೂ ಸಮಾನವಾಗಿ ಕಾಣುವ, ಸರ್ವರನ್ನೂ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡುವ ಧರ್ಮ ಶರಣ ಧರ್ಮವಾಗಿದೆ. ಅಂದಿನ ಶರಣ ಶರಣೆಯರು ರಚಿಸಿದ ವಚನಗಳ ಮೂಲಕ ಸಾಮಾಜಿಕ ಸಮಾನತೆಗೆ ಕಾರಣರಾದರು. 12ನೇ ಶತಮಾನ ಸಾಹಿತ್ಯ ದೃಷ್ಟಿಯಿಂದ ಒಂದು ಸಂಕ್ರಮಣ ಮತ್ತು ಪ್ರಗತಿಯ ಕಾಲವಾಗಿದೆ. ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ವಚನ ಸಾಹಿತ್ಯ, ಶರಣರ ಮೌಲ್ಯಗಳನ್ನು ಬಿತ್ತುವ ಶಾಲೆಯ ಕಾರ್ಯ ಶ್ಲಾಘನೀಯ ಎಂದರು.
ಸಂಸ್ಥೆಯ ಸಂಸ್ಥಾಪಕ ಟಿ. ಈಶ್ವರ ಅಧ್ಯಕ್ಷತೆವಹಿಸಿದ್ದರು. ಉತ್ತಮ ಶಿಕ್ಷಕ ರಾಜ್ಯಪ್ರಶಸ್ತಿ ಪುರಸ್ಕೃತ ಎಸ್.ಬಿ.ಕೇಸರಿ ಅವರನ್ನು ಸನ್ಮಾನಿಸಲಾಯಿತು. ಯಶಸ್ವಿ ಗ್ರುಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಎ.ಎಸ್. ಪಾಟೀ, ನಿರ್ದೇಶಕ ಎಚ್.ಸಿ. ರಟಗೇರಿ, ಪ್ರಾಚಾರ್ಯ ಆರ್.ಜಿ. ಭಾವಾನವರ ಇತರರಿದ್ದರು. ವಿದ್ಯಾರ್ಥಿಗಳಾದ ವಚನಾ, ವೇದಾ, ವರ್ಷಾ, ಪ್ರಿಯಾಂಕಾ, ಪ್ರವೀಣ ನಿರೂಪಿಸಿದರು.