ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ಸಾಹಿತ್ಯಕ್ಕೆ ಶರಣರು ನೀಡಿದ ವಚನ ಸಾಹಿತ್ಯ ಒಂದು ಅಪೂರ್ವ ಕೊಡುಗೆ. ಆದರೆ ಕೆಲವೇ ಕೆಲವು ವಚನಕಾರರ ಬಗ್ಗೆ ಉಪನ್ಯಾಸ, ಚರ್ಚೆ, ಅಧ್ಯಯನಗಳು ನಡೆಯುತ್ತಿವೆ. ಕೆಳ ವರ್ಗಗಳಿಂದ ಬಂದ ಅನೇಕ ವಚನಕಾರರ ಬಗ್ಗೆ ಚರ್ಚೆ ಸಂವಾದಗಳು ಇಲ್ಲವಾಗಿವೆ. ಹೀಗಾಗಿ ಆದ್ಯವಚನಕಾರ ದೇವರ ದಾಸಿಮಯ್ಯನವರಂತಹ ಮಹತ್ವದ ವಚನಕಾರರು ಅಂಚಿಗೆ ತಳ್ಳಲ್ಪಟ್ಟಿದ್ದಾರೆ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಪಂಪ ಅಧ್ಯಯನ ಪೀಠದ ಸಂಯೋಜಕ ಡಾ. ಜೆ.ಎಂ. ನಾಗಯ್ಯ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ ದತ್ತಿ ನಿಮಿತ್ತ ಭಾನುವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಶಾಸನಗಳಲ್ಲಿ ದೇವರ ದಾಸಿಮಯ್ಯ ಮತ್ತು ದುಗ್ಗಳೆ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಪತೆ ವಹಿಸಿದ್ದ ಧಾರವಾಡ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಆರ್.ಎಂ. ಷಡರಯ್ಯ ಮಾತನಾಡಿ, ದಾಸಿಮಯ್ಯನ ಚರಿತ್ರೆ ನಿರ್ಮಾಣಕ್ಕೆ ಪ್ರೊ.ಜೆ.ಎಂ. ನಾಗಯ್ಯನವರ ಉಪನ್ಯಾಸ ಪೂರಕವಾಗಿದೆ ಎಂದರು.
ಮಹಾದೇವ ಕರಮರಿ ವಚನಕಾರರ ಕೊಡುಗೆ ಸ್ಮರಿಸಿದರು. ದತ್ತಿದಾನಿ ಪ್ರಸನ್ನ ರಾಮಚಂದ್ರ ಗೆದ್ದೆಣ್ಣವರ, ಚಂದ್ರಕಾಂತ ಬೆಲ್ಲದ, ಬಸವಪ್ರಭು ಹೊಸಕೇರಿ, ಡಾ. ಶೈಲಜಾ ಅಮರಶೆಟ್ಟಿ, ಡಾ. ಮಹೇಶ ಹೊರಕೇರಿ, ವಿಶ್ವೇಶ್ವರಿ ಹಿರೇಮಠ, ಶಿವಾನಂದ ಭಾವಿಕಟ್ಟಿ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಧನವಂತ ಹಾಜವಗೋಳ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.