ಜಿಲ್ಲೆ

ಜಿಲ್ಲಾಡಳಿತ ಭವನದಲ್ಲಿ ಕಾಯಕ ಶರಣರ ಜಯಂತಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವನಹಳ್ಳಿಯ ಜಿಲ್ಲಾಡಳಿತಭವನದ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಕಾಯಕ ಶರಣರ ಜಯಂತಿ ಆಚರಿಸಲಾಯಿತು.

ಜಿಲ್ಲಾಧಿಕಾರಿ ಎ.ಬಿ ಬಸವರಾಜು ಕಾಯಕ ಶರಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. 11 ಮತ್ತು 12 ನೇ ಶತಮಾನವನ್ನು ವಚನ ಚಳುವಳಿಯ ಕಾಲವೆಂದೇ ಕರೆಯುತ್ತಾರೆ. ಈ ಕಾಲ ಘಟ್ಟದಲ್ಲಿ 200 ಕ್ಕೂ ಹೆಚ್ಚು ವಚನಕಾರರು ಇದ್ದರು. ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಹರಳಯ್ಯ, ಮತ್ತು ಉರಿಲಿಂಗ ಪೆದ್ದಿ ಇವರು ಬಸವಣ್ಣರ ಹಾದಿಯಲ್ಲಿ ನಡೆದು ಬಂದ ಶರಣರು ಎಂದು ಡಿಸಿ ಸ್ಮರಿಸಿದರು. ಯಾರಿಗೆ ವೇದದ ಅಧ್ಯಯನ ತಿರಸ್ಕರಿಸಿ ಅವರನ್ನು ಅಸಮಾನತೆಯಿಂದ ನೋಡಲಾಗುತ್ತಿತ್ತು ಅಂತಹ ವ್ಯವಸ್ಥೆಯನ್ನು ಬದಲಾಯಿಸಿದ್ದು ಈ ಶರಣರು. ಸಾವು ಅನ್ನುವಂತದ್ದು ದೇಹಕ್ಕೆ ಮಾತ್ರ ನಮ್ಮ ಆತ್ಮಕ್ಕೆ ಎಂದಿಗೂ ಸಾವಿಲ್ಲ ಎಂದು ತಮ್ಮ ವಚನಗಳ ಮೂಲಕ ಜನರಿಗೆ ತಿಳಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿದ್ದರು. ಅವರು ತಮ್ಮ ವಚನಗಳಲ್ಲಿ ತಿಳಿಸಿರುವ ಆಶಯಗಳನ್ನು ಅರಿತು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.