ಹುಬ್ಬಳ್ಳಿ; ಇಲ್ಲಿಯ ಸುಧಾ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಶರಣರ ಶಕ್ತಿ ಚಲನಚಿತ್ರದ ಕಲಾವಿದರನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಶಹರ ಹಾಗೂ ಗ್ರಾಮೀಣ ತಾಲೂಕು ಘಟಕಗಳ ವತಿಯಿಂದ ಬುಧವಾರ ಸನ್ಮಾನಿಸಲಾಯಿತು.
ಜಾನಪದ ವಿದ್ವಾಂಸ ಡಾ. ರಾಮು ಮೂಲಗಿ ಮಾತನಾಡಿ, ನಾಡಿಗೆ ಶರಣರು, ಸಂತರು, ದಾರ್ಶನಿಕರು ನೀಡಿದ ಕೊಡುಗೆ ಅಪಾರ. ಶರಣರ ಶಕ್ತಿ ಚಲನಚಿತ್ರದಲ್ಲಿ ಎಲ್ಲ ಕಲಾವಿದರು ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ ಎಂದರು.
ಪರಿಷತ್ತಿನ ಶಹರ ಘಟಕದ ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ ಮತ್ತು ಗ್ರಾಮೀಣ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಶಿವಳ್ಳಿ ಅವರು ಚಿತ್ರದಲ್ಲಿ ಬಸವೇಶ್ವರರ ಪಾತ್ರದಲ್ಲಿ ಸೈ ಎನಿಸಿಕೊಂಡ ಮಂಜುನಾಥಗೌಡ ಪಾಟೀಲ ಮತ್ತು ನಿರ್ಮಾಪಕಿ ಆರಾಧನಾ ಕುಲಕರ್ಣಿ ಅವರನ್ನು ಸನ್ಮಾನಿಸಿದರು.
ನಟ ಮಂಜುನಾಥಗೌಡ ಪಾಟೀಲ ಮಾತನಾಡಿ, ಶರಣರ ಬದುಕು ಹಾಗೂ ಶರಣರ ವಿಚಾರ ಧಾರೆಗಳನ್ನು ಹೊಂದಿರುವ ಚಲನಚಿತ್ರವನ್ನು ನಾಡಿನ ಜನ ವೀಕ್ಷಣೆ ಮಾಡುವ ಮೂಲಕ ಬೆಂಬಲಿಸಬೇಕೆಂದರು.
ಬಸವ ಬಳಗದ ನವೀನ ಕುದರಿ, ಪರಿಷತ್ತಿನ ಉಭಯ ತಾಲೂಕು ಘಟಕಗಳ ಕಾರ್ಯಕಾರಿಣಿ ಸದಸ್ಯರಾದ ಎಸ್.ವಿ. ಬಿದರಳ್ಳಿ, ಶಿಕ್ಷಕ ಶಿವಾನಂದ ಹರಕುಣಿ, ಪತ್ರಕರ್ತ ಎಂ.ಆರ್. ನದಾ್, ಎಂ.ಎಸ್. ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಕಮ್ಮಾರ ನಿರೂಪಿಸಿದರು.