ಅದ್ದೂರಿ ಉಚ್ಛಾಯಿಗೆ ದಾಸೋಹದ ಶರಣು
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಶರಣಬಸವೇಶ್ವರರಿಗೆ ಜೈಕಾರ, ಇಳಿಸಂಜೆಯಲ್ಲಿ ಬೆಳಗಿದ ದೀವಟಿಗೆ, ವಾದ್ಯ-ಮೇಳಗಳ ಘೋಷಣೆ, ಶಂಖನಾದದೊAದಿಗೆ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ೨೦೩ನೇ ಯಾತ್ರೆ(ಜಾತ್ರೆ) ನಿಮಿತ್ತ ಮಂಗಳವಾರ ಸಂಜೆ ಉಚ್ಛಾಯಿ (ಚಿಕ್ಕ ರಥ) ಉತ್ಸವ ಜರುಗಿತು.
ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ, ಚಿ.ದೊಡ್ಡಪ್ಪ ಅಪ್ಪ ಉಚ್ಛಾಯಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಧರ್ಮದಂಡ ಹೊತ್ತ ಸೇವಕರು ಉಚ್ಛಾಯಿ ಮೇಲೆ ನಿಂತು ಚಾಮರ ಬೀಸುತ್ತಲೇ ಉಚ್ಛಾಯಿ ಮುಂದೆ ಸಾಗಿ ಪುನಃ ಮೂಲ ಸ್ಥಾನ ತಲುಪಿತು.
ಡೊಳ್ಳು, ಹಲಗೆ, ಚಿಟ್ಟಲಗಿ ವಾದ್ಯ-ಮೇಳ, ಛತ್ರಿ-ಚಾಮರ, ಪುರವಂತರ ಸೇವೆಯೊಂದಿಗೆ ಶ್ರೀ ಶರಣಬಸವೇಶ್ವರರ ಪಲ್ಲಕ್ಕಿ ಉಚ್ಛಾಯಿಗೆ ಸುತ್ತು ಹಾಕಿದ ತಕ್ಷಣ ಸಹಸ್ರಾರು ಭಕ್ತರು ಶರಣಬಸವೇಶ್ವರ ಮಹಾರಾಜ ಕಿ ಜೈ, ಹರ ಹರ ಮಹಾದೇವ, ಪೂಜ್ಯ ದೊಡ್ಡಪ್ಪ ಅಪ್ಪ ಮಹಾರಾಜ ಕೀ ಜೈಕಾರ ಮೊಳಗಿಸಿದರು.
ಉತ್ಸವದ ನಂತರ ಭಕ್ತರು ಉಚ್ಛಾಯಿ ಮತ್ತು ಶರಣಬಸವೇಶ್ವರರ ಗದ್ದುಗೆಗೆ ನಮನ ಸಲ್ಲಿಸಿ ದಾಸೋಹ ಮನೆಯಲ್ಲಿ ಪ್ರಸಾದ ಸ್ವೀಕರಿಸಿದರು. ಉಚ್ಛಾಯಿ ನಡೆಯುತ್ತಿರುವಾಗಲೇ ರಥದ ಕಲಶಕ್ಕೆ ಪೂರ್ಣಪೀಠ ಅಳವಡಿಸಲಾಯಿತು. ನಂತರ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಇತರರಿದ್ದರು.