ಮೈಸೂರು: ಶರಣರ ಅಂತರಂಗದ ದಿವ್ಯವಾಣಿಯೇ ಜಗತ್ತಿನ ದಾರ್ಶನಿಕ ಸಾಹಿತ್ಯ ಎಂದು ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಹೇಳಿದರು.
ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ಎರಡು ದಿನಗಳ ಕಾಲ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳಿಗೆ ಏರ್ಪಡಿಸಿರುವ ಕಾರ್ಯಾಗಾರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದಲ್ಲಿ ಸೃಷ್ಟಿಯಾದ ವಚನ ಸಾಹಿತ್ಯವು ಶಬ್ದ ಚಮತ್ಕಾರಕೋಸ್ಕರ ಅಥವಾ ರಾಜಮಹಾರಾಜರಿಗೋಸ್ಕರ ಸೃಷ್ಟಿಯಾದ ಸಾಹಿತ್ಯವಲ್ಲ. ಸಾಮಾಜಿಕ ಬದ್ಧತೆ, ಸಾಮಾಜಿಕ ಕಳಕಳಿ, ಶೋಷಣೆ, ಮೂಢನಂಬಿ ಕೆಗಳ ವಿರುದ್ಧ ಹಾಗೂ ಸ್ತ್ರೀಯರಿಗೆ ಸಾಮಾಜಿಕ ಸ್ವಾತಂತ್ರೃ ನೀಡಲು ಸೃಷ್ಟಿಯಾದ ಸಾಹಿತ್ಯ ಎಂದು ಅಭಿಪ್ರಾಯಪಟ್ಟರು.
ವಚನ ಸಾಹಿತ್ಯವು ಆತ್ಮಾವಲೋಕನ, ಆತ್ಮಕಲ್ಯಾಣ, ವಿಶ್ವಭ್ರಾತೃತ್ವಕ್ಕಾಗಿ ರಚಿತವಾಗಿದ್ದು, ವಿಶ್ವ ಸಾಹಿತ್ಯದ ಕಿರೀಟವಾಗಿದೆ. ಹಾಗಾಗಿ ಶರಣ ತತ್ವಗಳ ಮೂಲ ಚಿಂತನೆ ಹಾಗೂ ಶರಣ ಸಾಹಿತ್ಯದ ಬಗ್ಗೆ ಅರಿವು ಹೊಂದಬೇಕು. ಶರಣ ಸಾಹಿತ್ಯದ ಬಗ್ಗೆ ತುಲನಾತ್ಮಕ ಸಂಶೋಧನೆಗಳು ನಡೆಯಬೇಕು. ಈ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕು ಹಾಗೂ ಜಿಲ್ಲಾ ಘಟಕಗಳು ಕ್ರಿಯಾಶೀಲವಾಗಬೇಕು. ಶಾಲಾ ಕಾಲೇಜುಗಳಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಶರಣ ತತ್ವದ ಮಹತ್ವ ತಿಳಿಸುವ ಸತ್ಕಾರ್ಯವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪರಿಷತ್ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣೆ, ಪರಿಷತ್‌ನಲ್ಲಿ ಕಾರ್ಯನಿರ್ವಹಿಸುವುದು ಪುಣ್ಯದ ಕೆಲಸ. ಒಳ್ಳೆಯ ಕಾರ್ಯಕ್ರಮಗಳ ಸಂಯೋಜನೆಯೊಂದಿಗೆ ಪರಿಷತ್ ಮುನ್ನಡೆಯಬೇಕು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆರ್ಶೀವಾದ ಹಾಗೂ ಮಾರ್ಗದರ್ಶನದಿಂದ ಪರಿಷತ್ ರಾಷ್ಟ್ರಾದ್ಯಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪರಿಷತ್ ಕಾರ್ಯದರ್ಶಿ ಶ್ರೀಶೈಲ ಪಟ್ಟಣಶೆಟ್ಟಿ, ಮೈಸೂರು ನಗರಾಧ್ಯಕ್ಷ ಮ.ಗು. ಸದಾನಂದಯ್ಯ, ಹಾಸನ ಜಿಲ್ಲಾ ಘಟಕದ ಉಪಾಧ್ಯಕ್ಷ ಕುಮಾರ್, ಕದಳಿ ಮಹಿಳಾ ವೇದಿಕೆ ರಾಜ್ಯ ಸಂಚಾಲಕಿ ಸುಶೀಲ ಸೋಮಶೇಖರ್ ಹಾಗೂ ಇತರರು ಇದ್ದರು.