ಸಿಂಧನೂರು: ಸಾಹಿತ್ಯದ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತುವ ಕೆಲಸ ಮಾಡಬೇಕು. ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳಸಲು ಸಮಾಜ ಶರಣ ಸಾಹಿತ್ಯದ ಮೊರೆ ಹೋಗಬೇಕಿದೆ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ನಾಗರಾಜ ಮಸ್ಕಿ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶರಣರ ಸಾಹಿತ್ಯ ಮತ್ತು ವಿಚಾರ ಧಾರೆಗಳು ಮನ-ಮನೆಗಳಿಗೆ ತಲುಪಿಸುವ ಕೆಲಸ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಸುತ್ತೂರು ಶ್ರೀಗಳ ಸಾಮಾಜಿಕ ಕಾಳಜಿ ಹಾಗೂ ಶರಣ ಸಾಹಿತ್ಯ ಕುರಿತ ಅಗಾಧ ಆಸಕ್ತಿ ಶರಣ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ನಾಂದಿಯಾಯಿತು. 12ನೇ ಶತಮಾನದಲ್ಲಿ ಬಸವಾದಿ ಶರಣರು ಅನಿಷ್ಠ ಪದ್ಧತಿಗಳನ್ನು ಕಿತ್ತೆಸೆಯಲು ವಚನ ಕ್ರಾಂತಿ ನಡೆಸುವ ಮೂಲಕ ಪ್ರಯತ್ನಿಸಿದ್ದರು ಎಂದು ನಾಗರಾಜ ಮಸ್ಕಿ ತಿಳಿಸಿದರು.
ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಶಿವರಾಜ ಕಾಯಕ ತತ್ವದ ಮಹತ್ವ ತಿಳಿಸಿದರು. ಶರಣ ಸಾಹಿತ್ಯ ಪರಿಷತ್ ತಾಲೂಕು ಉಪಾಧ್ಯಕ್ಷರಾದ ಬಸವರಾಜ ಹೊಸಳ್ಳಿ, ಸಂಗೀತಾ ಸಾರಂಗಮಠ, ಸಂಘಟನಾ ಕಾರ್ಯದರ್ಶಿಗಳಾದ ವೀರೇಶ ಯರದಿಹಾಳ, ಡಾ.ಹನುಮಂತ ಜವಳಗೇರಾ ಅವರಿಗೆ ಆದೇಶ ಪತ್ರ ನೀಡಲಾಯಿತು.
ಪ್ರಾಚಾರ್ಯ ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕನಗೌಡ, ತಾಲೂಕು ಅಧ್ಯಕ್ಷ ಶರಣಪ್ಪ ಹೊಸಳ್ಳಿ, ಕಸಾಪ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ಬಸವಕೇಂದ್ರದ ಜಿಲ್ಲಾ ಅಧ್ಯಕ್ಷ ವೀರಭದ್ರಪ್ಪ ಕುರಕುಂದಿ, ತತ್ವಪದಕಾರ ನಾರಾಯಣಪ್ಪ ಮಾಡಶಿರವಾರ, ಬಸವಕೇಂದ್ರದ ಬಸಲಿಂಗಪ್ಪ ಬಾದರ್ಲಿ, ಮುಖಂಡರಾದ ವೀರೇಶ, ಶರಭಯ ್ಯಸ್ವಾಮಿ, ಹನುಮಂತ, ಜಂಬಣ್ಣ ಇತರರು ಇದ್ದರು.