ಬಸವಕಲ್ಯಾಣ: ಅಂತರಂಗ-ಬಹಿರಂಗ ಶುದ್ಧಿ ಆಗಬೇಕು ಎಂಬ ಸರಳ ತತ್ವವನ್ನು ಶರಣರು ನೀಡಿದ್ದಾರೆ. ಬಸವಣ್ಣನವರ ವಚನಗಳು ಅಮೃತ ಸೇವನೆ ಇದ್ದಂತೆ. ಆದರೆ ವಚನಗಳ ಅಂತರಾಳ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ನುಡಿದರು.
ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಡಿ ಶರಣ ವಿಜಯೋತ್ಸವ ನಾಡಹಬ್ಬ ಮತ್ತು ಹುತಾತ್ಮ ದಿನಾಚರಣೆ ನಿಮಿತ್ತ ಹರಳಯ್ಯ ಗವಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ೨೦೨೪ರ ಶರಣ ವಿಜಯ ರಾಷ್ಟ್ರೀಯ ಪುರಸ್ಕಾರ ಸ್ವೀಕರಿಸಿದ ಶ್ರೀಗಳು, ನಡೆ-ನುಡಿ ಸಿದ್ಧಾಂತ ನೀಡಿದ ಬಸವಾದಿ ಶರಣರು ಮೆಚ್ಚಿದ ಹಾಗೆ ಬದುಕಿದರೆ ವರ, ಅವಕೃಪೆಗೆ ಒಳಗಾದರೆ ಅದೇ ಶಾಪ ಎಂದು ವಿಶ್ಲೇಷಿಸಿದರು.
ಶರಣರು ಅರಿವು, ಅನುಭವ ಮತ್ತು ಅನುಭಾವದ ಮೂಲಕ ವಚನ ರಚಿಸಿದ್ದಾರೆ. ಇಂದು ನಡೆ-ನುಡಿ ಒಂದಾಗಿಸಿದರೆ ಅಂದಿನ ಕಲ್ಯಾಣ ಕಟ್ಟಬಹುದು. ಮನುಷ್ಯ ಸಂಪತ್ತು, ಪದವಿ, ಅಧಿಕಾರದಿಂದ ದೊಡ್ಡನಾಗಲ್ಲ. ಸರ್ವರೊಳು ಒಂದಾಗಿ ಬಾಳಿದಾಗಲೇ ದೊಡ್ಡವನಾಗುತ್ತಾನೆ. ಸದಾಚಾರ, ಸನ್ನಢತೆ, ಸದ್ವಿಚಾರದೊಂದಿಗೆ ಪೂಜಿಸಿದರೆ ಭಗವಂತ ಒಲಿಯುತ್ತಾನೆ ಎಂದರು.
ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿ, ಬಸವ ತತ್ವ ಅಪೂರ್ವವಾಗಿದೆ. ಲಿಂಗಾಯತರ ಹಬ್ಬ ಶರಣರ ವಿಜಯ, ಹುತಾತ್ಮ ದಿನಾಚರಣೆ, ಸಮ ಸಮಾಜದ ನಿರ್ಮಾಣಕ್ಕಾಗಿ ಶರಣರ ತ್ಯಾಗ ಬಲಿದಾನವನ್ನು ಜಗತ್ತಿಗೆ ತಿಳಿಸಬೇಕಾಗಿದೆ ಎಂದು ನುಡಿದರು.
ವಚನ ವಿಶ್ವವಿದ್ಯಾಲಯ ಸ್ಥಾಪನೆ ಬೇಡಿಕೆಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಕೆಲಸ ಬರುವ ದಿನಗಳಲ್ಲಿ ಆಗಲಿದೆ. ಎಲ್ಲ ರಾಷ್ಟ್ರಗಳು ಕಲ್ಯಾಣ ಕಡೆ ನೋಡುವಂತಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಉದ್ಘಾಟಿಸಿದರು. ನೇತೃತ್ವ ವಹಿಸಿದ್ದ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಪ್ರಾಸ್ತಾವಿಕ ಮಾತನಾಡಿದರು.
ಸ್ವಾಗತ ಸಮಿತಿ ಅಧ್ಯಕ್ಷರಾದ ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿದ್ದರು. ಎಂಎಲ್‌ಸಿ ಎಂ.ಜಿ. ಮುಳೆ, ನಿವೃತ್ತ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ, ಕಲಬುರಗಿ ಶರಣಬಸವ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಕಲ್ಯಾಣರಾವ ಪಾಟೀಲ್, ಬಿಡಿವಿಸಿ ಉಪಾಧ್ಯಕ್ಷ ಶಶಿಕಾಂತ ದುರ್ಗೆ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ, ತಾಲೂಕು ಅಧ್ಯಕ್ಷ ಬಸವರಾಜ ತೊಂಡಾರೆ, ಬಸವದಳ ತಾಲೂಕು ಅಧ್ಯಕ್ಷ ರವೀಂದ್ರ ಕೊಳಕೂರ, ಉದ್ಯಮಿ ಕಾವೇರಿ ಪಾಟೀಲ್, ಶಿವರಾಜ ನರಶೆಟ್ಟಿ, ಚನ್ನಪ್ಪ ಪರ್ತಾಪುರೆ ಇತರರಿದ್ದರು.
ಬಸವರಾಜ ಬಾಲಿಕಿಲೆ ಸ್ವಾಗತಿಸಿದರು. ಜ್ಯೋತಿ ತೂಗಾಂವೆ ನಿರೂಪಣೆ ಮಾಡಿದರು. ನಿವೃತ್ತ ಡೀನ್ ಡಾ.ಅಮರನಾಥ ಸೋಲಪುರೆ ರಚಿಸಿದ ಇಷ್ಟಲಿಂಗ ಪೂಜಾ ಯೋಗ ಗ್ರಂಥ ಬಿಡುಗಡೆಗೊಳಿಸಲಾಯಿತು. ಶಿವಕುಮಾರ ಪಂಚಾಳ ಮತ್ತು ಸಂಗಡಿಗರ ವಚನಗಾಯನ ಗಮನಸೆಳೆಯಿತು.
ಎಳೆಹೂಟೆಯ ಮೆರವಣಿಗೆ: ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ, ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ನೇತೃತ್ವದಲ್ಲಿ ಐತಿಹಾಸಿಕ ಕೋಟೆಯಿಂದ ಹರಳಯ್ಯ ಗವಿವರೆಗೆ ಶರಣ ಸಂಸ್ಕೃತಿ ವೈಭವದ ಎಳೆಹೂಟೆಯ ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಚಾಲನೆ ನೀಡಿದರು. ಸೊಲ್ಲಾಪುರದ ಮಹೇಂದ್ರಕುಮಾರ ಬಾಬಾಸಾಹೇಬ್ ಧ್ವಜಾರೋಹಣ ನೆರವೇರಿಸಿದರು. ಎಳೆಹೂಟೆಯ ಚಿತ್ರಗಳು, ಎತ್ತಿನ ಬಂಡಿಯಲ್ಲಿ ಶರಣರ ಚಿತ್ರ, ಬಿಜ್ಜನಳ್ಳಿಯಲ್ಲಿ ನಿರಂತರ ಬೆಳಗುತ್ತಿರುವ ಜ್ಯೋತಿಯನ್ನು ಮುಟ್ಟಿದ ಜ್ಯೋತಿ, ಬಸವ ರಥ, ಕುದುರೆ-ಒಂಟೆಗಳ ಮೇಲೆ ಶರಣ ವೇಷಧಾರಿಗಳು, ವಚನ ಭಜನೆ ತಂಡಗಳು, ಕೋಲಾಟ, ಡೊಳ್ಳು, ವಚನಗಳಿಗೆ ನೃತ್ಯ, ಪುರವಂತರ ಒಡಪುಗಳು ಮೆರವಣಿಗೆ ಮೆರುಗು ಹೆಚ್ಚಿಸಿದವು. ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೊರಕೆ, ಶಿವರಾಜ ಶಾಶೆಟ್ಟೆ, ರೇವಣಪ್ಪ ರಾಯವಾಡೆ, ಬಸವರಾಜ ತೊಂಡಾರೆ, ಬಸವರಾಜ ಬಾಲಿಕಿಲೆ, ಶಿವಕುಮಾರ ಬಿರಾದಾರ, ಶಿವಕುಮಾರ ಶೆಟಕಾರ, ಹಣಮಂತ ಧನಶೆಟ್ಟಿ, ಲಕ್ಷಿö್ಮÃಕಾಂತ ಜ್ಯಾಂತೆ, ಶಂಕರ ಕರಣೆ ಇತರರಿದ್ದರು. ಇದಕ್ಕೂ ಮುನ್ನ ೭೭೦ ಅಮರಗಣಂಗಳ ಸಾಂಕೇತಿಕ ಸಾಮೂಹಿಕ ಇಷ್ಟಲಿಂಗ ಯೋಗ ನಡೆಯಿತು.
ಶರಣರಿಗೆ ಪ್ರಾಣಕ್ಕಿಂತ ತತ್ವ ಮತ್ತು ಸಿದ್ಧಾಂತ ಮುಖ್ಯವಾಗಿತ್ತು. ಬಸವಾದಿ ಶರಣರ ವಿಚಾರಗಳು ಸರ್ವ ಕಾಲ, ದೇಶ ಹಾಗೂ ಸರ್ವ ಜನಾಂಗದ ಪ್ರಗತಿಗೆ ಅವಶ್ಯಕವಾಗಿವೆ. ಆದರೆ ಕೆಲವರು ಇಂಥ ವಿಚಾರಗಳಿಗೆ ಮಸಿ ಬಳಿಯುವಂಥ ಕೆಲಸ ಮಾಡುತ್ತಿರುವುದು ಸರಿಯಲ್ಲ.
| ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ
ಸಾಣೇಹಳ್ಳಿ ತರಳುಬಾಳು ಮಠ
ಮಾನವ ಕಲ್ಯಾಣಕ್ಕಾಗಿ ವಚನಗಳ ವಿಶ್ಲೇಷಣೆಯ ಮರು ವ್ಯಾಖ್ಯಾನಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಧ್ಯಯನ ಸಂಶೋಧನೆ ನಿರಂತರ ನಡೆಯಲು ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಪ್ರಾರಂಭಿಸುವುದು ಅವಶ್ಯಕವಾಗಿದೆ. ಈ ಕಾರ್ಯ ಆದಷ್ಟು ಬೇಗ ನೆರವೇರಲಿ.
| ಪ್ರೊ.ದಯಾನಂದ ಅಗಸರ ಕುಲಪತಿ, ಗುಲ್ಬರ್ಗ ವಿವಿ