ಚಿತ್ರದುರ್ಗ: ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಿಂದ ಪ್ರತಿ ವರ್ಷದಂತೆ ಈ ವರ್ಷವೂ ಶರಣಸಂಸ್ಕೃತಿ ಉತ್ಸವ ಆಚರಣೆ ಕುರಿತಂತೆ ಅನುಭವ ಮಂಟಪದಲ್ಲಿ ಬುಧವಾರ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು. ಉತ್ಸವ ಸೆ.28ರಿಂದ ಅ.6ರವರೆಗೆ ನಡೆಯಲಿದೆ ಎಂದು ಶರಣರು ಪ್ರಕಟಿಸಿದರು.
ಸೆ.28ರಿಂದ ಮೂರು ದಿನಗಳ ಕಾಲ ವಿವಿಧ ಸ್ಪರ್ಧೆಗಳು, ಅ.5ರಂದು ಜಾನಪದ ಕಲಾಮೇಳ, ಶರಣ ಸಂಸ್ಕೃತಿ ಉತ್ಸವ, 6ರಂದು ಶೂನ್ಯ ಪೀಠಾರೋಹಣ, ಕೃಷಿ ಮೇಳದಲ್ಲಿ ಕೈಗಾರಿಕೆ ಮತ್ತು ವಸ್ತು ಪ್ರದರ್ಶನ ಹಾಗೂ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಉತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ಶರಣರ ಆಲೋಚನೆಗಳು ವಿಸ್ತಾರ ಪಡೆದಿವೆ. ಅನೇಕ ಸಾಮಾಜಿಕ ಚಟುವಟಿಕೆಗಳನ್ನು ಶ್ರೀಗಳು ನಿರ್ವಹಿಸುತ್ತಿದ್ದಾರೆ. ಶ್ರೀಮಠ ಎಲ್ಲ ಸಮುದಾಯದವರ ಮಠವಾಗಿದೆ. ಈ ಬಾರಿ ಉತ್ಸವವನ್ನು ಅರ್ಥಪೂರ್ಣವಾಗಿ ನಡೆಸಲು ಶ್ರಮಿಸಲಾಗುವುದು ಎಂದರು. ವಕೀಲ ಫಾತ್ಯರಾಜನ್ ವೇಟ್‌ಲಿಫ್ಟಿಂಗ್, ದೇಹದಾರ್ಢ್ಯ ಸ್ಪರ್ಧೆಗೆ ಸಲಹೆ ನೀಡಿದರು.
ದಾನಿಗಳ ನೆರವು ಘೋಷಣೆ:
ಸಮಿತಿ ಕಾರ್ಯಾಧ್ಯಕ್ಷ, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ 25 ಲಕ್ಷ ರೂ. ಹಾಗೂ ಬಸವಕುಮಾರ ಸ್ವಾಮೀಜಿ ಉತ್ಸವಕ್ಕೆ ತಲಾ 25 ಲಕ್ಷ ರೂ. ದೇಣಿಗೆ ಘೋಷಿಸಿದರು. ಉತ್ಸವಕ್ಕೆ ದಾವಣಗೆರೆ ಜಯಕುಮಾರ್ 5 ಲಕ್ಷ ರೂ., ಎಚ್.ಆನಂದಪ್ಪ ಎಂ.ಕೆ.ಹಟ್ಟಿ 1 ಲಕ್ಷ ರೂ., ತುಮಕೂರು ಜಯದೇವ ವಿದ್ಯಾರ್ಥಿ ನಿಲಯ 2 ಲಕ್ಷ ರೂ., ವೀರಶೈವ ಸಮಾಜ 1 ಲಕ್ಷ ರೂ., ಶ್ರೀ ಶಿವಬಸವ ಗುರು ಮುರುಘರಾಜೇಂದ್ರ ಸ್ವಾಮೀಜಿ 4 ಲಕ್ಷ ರೂ., ಸಿದ್ದಾಪುರ ನಾಗಣ್ಣ 50 ಸಾವಿರ ರೂ. ಹಾಗೂ ಗಾಣಿಗ ಸಮಾಜದಿಂದ ದಾಸೋಹ ವ್ಯವಸ್ಥೆ ಕಲ್ಪಿಸುವ ವಾಗ್ದಾನ ನೀಡಿದರು ಪ್ರಮುಖರು.