ಹುಬ್ಬಳ್ಳಿ: ರಂಗಕರ್ಮಿ ಗುರುಸಿದ್ದಪ್ಪ ಎಂ. ಬಡಿಗೇರ ಅವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಶಹರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಧಾರವಾಡದ ರಂಗಾಯಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ವಿವಿಧ ತಾಲೂಕು ಘಟಕಗಳ ಪದಗ್ರಹಣ ಸಮಾರಂಭದಲ್ಲಿ ಇವರು ನೇಮಕದ ಪ್ರಮಾಣಪತ್ರ ಪಡೆದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ ಗೊ.ರು. ಚನ್ನಬಸಪ್ಪ ಅವರು ಬಡಿಗೇರ ಅವರಿಗೆ ಸೇವಾ ದೀಕ್ಷೆ ನೀಡಿದರು.
ಧಾರವಾಡ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಂಗಮನಾಥ ಲೋಕಾಪುರ, ಡಾ. ಎಂ.ಎಂ. ಕಲಬುರ್ಗಿ ಟ್ರಸ್ಟ್ ಅಧ್ಯಕ್ಷ ಡಾ. ವೀರಣ್ಣ ರಾಜೂರ, ಡಾ. ದ.ರಾ. ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ, ಜಾನಪದ ವಿದ್ವಾಂಸ ಡಾ. ರಾಮು ಮೂಲಗಿ, ಸಾಹಿತಿ ಸಿ.ಎಂ. ಚೆನ್ನಬಸಪ್ಪ, ಇತರರಿದ್ದರು.
ಹುಬ್ಬಳ್ಳಿ ನಗರ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಕಮ್ಮಾರ ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಶಿಕ್ಷಕ ಶಿವಾನಂದ ಹರಕುಣಿ, ರೀಟಾ ಶಿಗ್ಗಾವಿ, ಮಂಜುನಾಥ ಹುಂಬಿ, ಎಸ್.ವಿ. ಬಿದರಳ್ಳಿ ಪದಗ್ರಹಣ ಮಾಡಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರನ್ನು ನಗರ ತಾಲೂಕು ಘಟಕದಿಂದ ಸನ್ಮಾನಿಸಲಾಯಿತು.