ವಿಜಯವಾಣಿ ಸುದ್ದಿಜಾಲ ಧಾರವಾಡ
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲ ಸಂಗಮ ಕ್ರಾಸ್ ಬಳಿಯ ಹೂವನೂರು ಗ್ರಾಮದ ಹೊರವಲಯದಲ್ಲಿ 2024ರ ಜನವರಿ 13ರಿಂದ 15ರವರೆಗೆ ಸ್ವಾಭಿಮಾನಿ ಶರಣ ಮೇಳ ಆಯೋಜಿಸಲಾಗಿದೆ ಎಂದು ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಅಧ್ಯಕ್ಷ ಡಾ. ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 13ರಂದು ಸಿಎಂ ಸಿದ್ದರಾಮಯ್ಯ ಶರಣ ಮೇಳಕ್ಕೆ ಚಾಲನೆ ನೀಡುವರು. ಸಾನ್ನಿಧ್ಯವನ್ನು ಬೀದರ ಬಸವ ಮಂಟಪದ ಮಾತೆ ಸತ್ಯಾದೇವಿ, ಬೆಳಗಾವಿ ಬಸವ ಮಂಟಪದ ಶ್ರೀ ಪ್ರಭುಲಿಂಗ ಸ್ವಾಮೀಜಿ ವಹಿಸಲಿದ್ದು, ಅಕ್ಕನಾಗಲಾಂಬಿಕಾ ಮಾತಾಜಿ, ಚಿಕ್ಕಮಗಳೂರಿನ ವಿಶ್ವಧರ್ಮ ಪೀಠದ ಶ್ರೀ ಜಯ ಬಸವಾನಂದ ಸ್ವಾಮೀಜಿ, ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸೇರಿ ನಾಡಿನ ಹಲವು ಮಠಾಧೀಶರು, ಗಣ್ಯರು ಪಾಲ್ಗೊಳ್ಳುವರು ಎಂದರು.
ಶರಣ ಮೇಳ ಉದ್ಘಾಟನೆ ಬಳಿಕ ಧರ್ಮ ಚಿಂತನಗೋಷ್ಠಿ, ಯುವಗೋಷ್ಠಿ, ಜ.14 ರಂದು ಸಮುದಾಯ ಪ್ರಾರ್ಥನೆ, ಸಾಮೂಹಿಕ ಇಷ್ಟಲಿಂಗ ಪೂಜೆ, ಮಹಿಳಾ ಗೋಷ್ಠಿ, ಜ.15ರಂದು ಕಾಯಕಯೋಗಿ ಸಿದ್ಧರಾಮೇಶ್ವರರ ಜಯಂತಿ, ಪಥ ಸಂಚಲನ ಜರುಗಲಿದೆ. ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಈ ಶರಣ ಮೇಳದಲ್ಲಿ 108 ಎತ್ತರದ ಬಸವಧ್ವಜದ ಮೆರವರಣಿಗೆ ನಡೆಯಲಿದೆ ಎಂದರು.
ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಘೋಷಣೆ ಮಾಡುವುದರ ಜತೆಗೆ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಲಭಿಸುವಂತೆ ರಾಜ್ಯ ಸರ್ಕಾರಿ ಮತ್ತೊಮ್ಮೆ ಪ್ರಸ್ತಾವ ಸಲ್ಲಿಸುವಂತೆ ಮೇಳದಲ್ಲಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.
ಅಶೋಕ ಶೀಲವಂತ, ಸೂರ್ಯಕಾಂತ ಶೀಲವಂತ, ಶಿವಯೋಗಿ ಕೋರಿ, ಅನಸೂಯಾ ಶೀಲವಂತ, ಇತರರು ಇದ್ದರು.