ಮಂಗಳೂರು: ನಗರದ ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯ ದಿವಸದ ರಜತ ಮಹೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಮಾತನಾಡಿ ‘ನಮ್ಮ
ಸಂಸ್ಕೃತಿಯಲ್ಲಿ ಭೂಮಿಯನ್ನು ಮಾತೆ ಎಂಬುದಾಗಿ ಭಕ್ತಿ ಗೌರವದಿಂದ ಕಾಣುತ್ತೇವೆ.ಇದೇ ಭಾವನೆ ನಮ್ಮ ಭಾರತೀಯ
ಯೋಧರಿಗೂ ಪ್ರೇರಣೆಯಾಗಿದೆ. ಜಗತ್ತಿನಲ್ಲಿ ಭಾರತೀಯ ಯೋಧರಿಗೆ ಅತ್ಯಂತ ಗೌರವದ ಸ್ಥಾನಮಾನವಿದೆ. ಮಾತೃಭೂಮಿಯ ರಕ್ಷಣೆಗಾಗಿ ವೀರಾವೇಶದಿಂದ ಹೋರಾಡಿ, ಬಲಿದಾನವಾದ ಯೋಧರ ಪತ್ನಿಯರ ಮನೋಧೈರ್ಯ ಕೂಡಾ ನಮಗೆ ಅತ್ಯಂತ
ಪ್ರೇರಣಾದಾಯಕ ಎಂದರು.
ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಸುರತ್ಕಲ್ ನಿವಾಸಿ ವೀರ ಯೋಧ ನಾಕ್ ಲೀಲಾಧರ್ ಕಡಂಬೋಡಿ ಅವರು
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎನ್.ಸಿ.ಸಿ. ಕೆಡೆಟ್ ಅಶ್ವಲ್ ಎನ್. ಕಾರ್ಗಿಲ್ ಯುದ್ಧದ ಮಹತ್ವಪೂರ್ಣ ಘಟನೆಗಳ ವಿವರ ನೀಡಿದರು. ಕಳೆದ ಶೈಕ್ಷಣಿಕ ವರ್ಷದ ಎನ್‌ಸಿಸಿ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಾರದಾ ವಿದ್ಯಾಲಯದ ವಾಯುದಳ ಎನ್.ಸಿ.ಸಿ. ಘಟಕದ ನಾಲ್ಕನೇ ಬ್ಯಾಚಿನ 42 ಕೆಡೆಟ್‌ಗಳಿಗೆ ಮುಖ್ಯ ಅತಿಥಿಗಳು ಪ್ರಮಾಣ ಪತ್ರ ವಿತರಿಸಿದರು.
ಶಾರದಾ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರದೀಪ ಕುಮಾರ ಕಲ್ಕೂರ, ವಿಶ್ವಸ್ಥ ಸುಧಾಕರ ರಾವ್ ಪೇಜಾವರ, ವಿದ್ಯಾಲಯದ ಹಿರಿಯ ಪ್ರಾಂಶುಪಾಲೆ ಸುನೀತಾ ವಿ. ಮಡಿ, ಪ್ರಾಂಶುಪಾಲ ದಯಾನಂದ ಕಟೀಲ್, ಎನ್.ಸಿ.ಸಿ ಅಧಿಕಾರಿ ರತ್ನಾಕರ್ ಉಪಸ್ಥಿತರಿದ್ದರು.
ಕೆಡೆಟ್ ಭೌಮಿಕ್ ಆಳ್ವ ಸ್ವಾಗತಿಸಿ, ಕೆಡೆಟ್ ಅವಂತಿಕಾ ವಿವೇಕ್ ವಂದಿಸಿದರು. ಕೆಡೆಟ್ ಪ್ರೇರಣಾ ಭಂಡಾರ್ಕಾರ್ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಕೆಡೆಟ್ ಶ್ರೀಯಾ ಜಿ. ಶೆಟ್ಟಿ ಮತ್ತು ಕೆಡೆಟ್ ಅರ್ಣಾ ಸುಧೀಂದ್ರ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾಲಯದ ಎನ್.ಸಿ.ಸಿ. ಕೆಡೆಟ್‌ಗಳು ದೇಶಭಕ್ತಿಗೀತೆ, ನೃತ್ಯ ಪ್ರದರ್ಶನ ಹಾಗೂ ಭಾರತೀಯ ವೀರ ಯೋಧರ ಶೌರ್ಯ ಸಾಹಸದ ಘಟನೆಗಳನ್ನು ನೆನೆಪಿಸುವ ಯುದ್ಧ ದೃಶ್ಯದ ಪ್ರಹಸನಗಳನ್ನು ಪ್ರದರ್ಶಿಸಿದರು.