ಜಿಲ್ಲೆ

ರಥಬೀದಿ ಶಾರದಾ ಮಹೋತ್ಸವ ಸಮಿತಿಯಿಂದ ಶತಮಾನೋತ್ಸವ ಸಾಂಸ್ಕೃತಿಕ ಸಪ್ತಾಹ

reportermng

ಮಂಗಳೂರು: ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠ ವಠಾರದ ಶ್ರೀ ಶಾರದಾ ಮಹೋತ್ಸವ ಈ ಬಾರಿ ಶತಮಾನದ ಸಂಭ್ರಮದಲ್ಲಿದ್ದು, ಶ್ರೀ ಶಾರದಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ಆ.29ರಿಂದ ಸೆ.4ರವರೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಶತಮಾನೋತ್ಸವ ಸಾಂಸ್ಕೃತಿಕ ಸಪ್ತಾಹ’ ಆಯೋಜಿಸಲಾಗಿದೆ.
ಆ.29ರಂದು ಸಂಜೆ 4ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ಕುಮಾರ್ ಸಪ್ತಾಹ ಉದ್ಘಾಟಿಸುವರು. ಶಾಸಕ ವೇದವ್ಯಾಸ ಕಾಮತ್ ಕಲಾಸರಸ್ವತಿ ಪುರಸ್ಕಾರ, ಮೇಯರ್ ಪ್ರೇಮಾನಂದ ಶೆಟ್ಟಿ ವಿದ್ಯಾಸರಸ್ವತಿ ಪುರಸ್ಕಾರ ಉದ್ಘಾಟಿಸುವರು ಎಂದು ದೇವಳದ ತಂತ್ರಿ, ಆಚಾರ್ಯ ಮಠದ ಪಂಡಿತ್ ನರಸಿಂಹ ಆಚಾರ್ಯ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಂಸ್ಕೃತಿಕ ರಂಗದಲ್ಲಿ ದುಡಿದ ಹಿರಿಯ 100 ಮಂದಿ ಕಲಾವಿದರನ್ನು ಕಲಾಸರಸ್ವತಿ ಪುರಸ್ಕಾರದೊಂದಿಗೆ ಸನ್ಮಾನಿಸಲಾಗುವುದು. ವಿದ್ಯಾಸರಸ್ವತಿ ಪುರಸ್ಕಾರವನ್ನು ಜಿಲ್ಲಾದ್ಯಂತ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನೀಡಲಾಗುವುದು. ಕೊಂಕಣಿ, ಕನ್ನಡ, ತುಳು, ಸಂಸ್ಕೃತ ಮೊದಲಾದ ಭಾಷಾವಾರು ನಾಟಕ, ಸಂಗೀತ, ನೃತ್ಯ ವಾದ್ಯಗಳನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಯಕ್ಷಗಾನ ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ಮಾತನಾಡಿ, ಮಂಗಳೂರು ಪುರಭವನದ ಶಾರದಾ ಮಹೋತ್ಸವ ಶತಮಾನೋತ್ಸವ ಸಂಭ್ರಮ ವೇದಿಕೆಯಲ್ಲಿ ಆ.30ರಂದು ಸಂಜೆ 4ರಿಂದ ರಾತ್ರಿ 9ರವರೆಗೆ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದಿಂದ ‘ಶರಸೇತು ಬಂಧನ- ತುಳುನಾಡ ಬಲೀಂದ್ರೆ’ ತಾಳಮದ್ದಳೆ ನಡೆಯಲಿದೆ ಎಂದರು.
ಸಮಿತಿ ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ, ಭಾಸ್ಕರ ಭಟ್, ಅರುಣ್ ಪಡಿಯಾರ್, ಎಂ.ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.