ಜಿಲ್ಲೆ

ಶರಭಾವತಾರಿ ಶ್ರೀ ವೀರಭದ್ರೇಶ್ವರ ರಥೋತ್ಸವ

ರಟ್ಟಿಹಳ್ಳಿ: ಪಟ್ಟಣದ ಐತಿಹಾಸಿಕ ಶರಭಾವತಾರಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ದೊಡ್ಡ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅದ್ದೂರಿಯಾಗಿ ಜರುಗಿತು. 30ಕ್ಕೂ ಹೆಚ್ಚು ಗುಗ್ಗಳ ಮಹೋತ್ಸವ, ಪುರವಂತರ ಒಡಪುಗಳಗೊಂದಿಗೆ ವೈಭವಯುತವಾಗಿ ರಥೋತ್ಸವ ಸಂಪನ್ನಗೊಂಡಿತು.

ಬೆಳಗ್ಗೆ 6 ಗಂಟೆಗೆ ದೇವಸ್ಥಾನದ ಆವರಣದಲ್ಲಿ ರಥೋತ್ಸವಕ್ಕೆ ಪಟ್ಟಣದ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ದೇವಸ್ಥಾನ ಕಮೀಟಿ ಚೇರ್ಮನ್ ಆರ್.ಜಿ. ದ್ಯಾವಕ್ಕಳವರ ಮತ್ತು ಭಕ್ತರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. ದೇವಸ್ಥಾನದ ಆವರಣದಿಂದ ಪ್ರಾರಂಭವಾದ ರಥೋತ್ಸವವು ಹಳೇ ಬಸ್ ನಿಲ್ದಾಣ, ಕಾರಂಜಿ ಸರ್ಕಲ್, ಬಸವೇಶ್ವರ ದೇವಸ್ಥಾನ, ಕುಮಾರೇಶ್ವರ ಶಾಲೆ ರಸ್ತೆಯ ಮಾರ್ಗದಲ್ಲಿ ಸಾಗಿ 9.30ಕ್ಕೆ ಗಡಿಯನ್ನು ತಲುಪಿತು. ಪುನಃ 10.30ಕ್ಕೆ ಅದೇ ಮಾರ್ಗವಾಗಿ ರಥೋತ್ಸವ ದೇವಸ್ಥಾನಕ್ಕೆ ಆಗಮಿಸಿ ಮಧ್ಯಾಹ್ನ 1.30ಕ್ಕೆ ಸಂಪನ್ನಗೊಂಡಿತು. ರುದ್ರೇಶ ಪ್ರಸಾದಿಮಠ ಪೌರೋಹಿತ್ಯ ನಿರ್ವಹಿಸಿದರು.

ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಥೋತ್ಸವಕ್ಕೆ ಬಾಳೆಹಣ್ಣು, ತೆಂಗಿನಕಾಯಿ ಸಮರ್ಪಿಸಿ ಸ್ವಾಮಿಯ ದರ್ಶನ ಮಾಡಿದರು. ರಥೋತ್ಸವದ ವೇಳೆ ಸ್ಥಳೀಯ ಶ್ರೀ ಬೀರಲಿಂಗೇಶ್ವರ ಸ್ವಾಮಿ ಮತ್ತು ಶ್ರೀ ದುರ್ಗಾದೇವಿ ಪಲ್ಲಕ್ಕಿ ಉತ್ಸವವು ಸಾಗಿತು. ಸ್ಥಳೀಯ ಬೇಡರ ಕಣ್ಣಪ್ಪ ದೇವಸ್ಥಾನ ಮತ್ತು ಬೀರಲಿಂಗೇಶ್ವರ ಗಳೆಯರ ಬಳಗದ ಡೊಳ್ಳಿನ ಮೇಳದ ಮೂಲಕ ಅದ್ದೂರಿ ರಥೋತ್ಸವಕ್ಕೆ ಸಾಕ್ಷಿಯಾಯಿತು.

ತಾಲೂಕಿನ ನೇಶ್ವಿ, ಮಕರಿ, ಕುಡುಪಲಿ, ಹುಲ್ಲತ್ತಿ, ರಟ್ಟಿಹಳ್ಳಿ, ಶಿರಗಂಬಿ, ದೊಡ್ಡಗುಬ್ಬಿ, ಕುಂಚೂರು, ತುಮ್ಮಿನಕಟ್ಟಿ, ತಾವರಗಿ, ಕೋಟ ಸೇರಿದಂತೆ ವಿವಿಧ ಗ್ರಾಮಗಳಿಂದ 30ಕ್ಕೂ ಹೆಚ್ಚು ಗುಗ್ಗುಳ ಮಹೋತ್ಸವವು ಆಗಮಿಸಿದ್ದವು. ಕಳೆದ 3 ದಿವಸಗಳಿಂದ ಕುದುರೆ ಉತ್ಸವ, ಆನೆ ಉತ್ಸವ ಮತ್ತು ಹೂವಿನ ತೇರು ಸಂಭ್ರಮದಿಂದ ಜರುಗಿದವು.

ಅನ್ನ ಸಂತರ್ಪಣೆ: ಬಿರು ಬಿಸಲಿನಲ್ಲಿ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಆಯಾಸ ತಪ್ಪಿಸಲು ಪಟ್ಟಣದ ನಮ್ಮೂರು ನಮ್ಮವರು ಗೆಳೆಯರ ಬಳಗ, ಕಂಪು ಬಳಗದಿಂದ ಭಕ್ತರ ಸಹಕಾರದೊಂದಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ನಕ್ಷತ್ರ, ಕಲ್ಪವೃಕ್ಷ, ಸ್ನೇಹಜೀವಿ, ಕುಮಾರೇಶ್ವರ ಬಳಗ, ಬಾಬುಸಾಬ್ ಜಡದಿ ಮತ್ತು ನಜೀರುಲ್ಲಾ ಸೈಕಲ್ಗಾರ ಹಾಗೂ ಚಿಕ್ಕೇರೂರು ಅರುಣಕುಮಾರ ಶೆಟ್ಟರ್ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ತಂಪು ಪಾನೀಯ ವಿತರಿಸಲಾಯಿತು. ಚಿಕ್ಕೇರೂರು ಮತ್ತು ಹಿರೇಕೆರೂರು ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ 20 ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು. ಶಿಕ್ಷಕರು ಸಿ.ಎಸ್. ಚಕ್ರಸಾಲಿ ಕಾರ್ಯಕ್ರಮ ನಿರ್ವಹಿಸಿದರು.