ಜಿಲ್ಲೆ

ಬಟ್ಟೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಶಾಂತವ್ವ ಮುಂದುವರಿಕೆ

ಲಕ್ಷ್ಮೇಶ್ವರ: ತಾಲೂಕಿನ ಬಟ್ಟೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತವ್ವ ಚನ್ನಬಸಪ್ಪ ಹಡಪದ ವಿರುದ್ಧ ಅವಿಶ್ವಾಸ ಮಂಡನೆಗೆ ಸೋಮವಾರ ನಡೆದ ಸಭೆಯ ನಡುವೆಯೂ ನಾಟಕೀಯ ತಿರುವು ಪಡೆದುಕೊಂಡು ಪುನಃ ಅಧ್ಯಕ್ಷ ಸ್ಥಾನ ಗಟ್ಟಿಗೊಳಿಸಿಕೊಂಡರು.

ಅಧ್ಯಕ್ಷೆ ವಿರುದ್ಧ 12 ಸದಸ್ಯರು ಉಪವಿಭಾಗಾಧಿಕಾರಿ ಕಚೇರಿಗೆ ದೂರು ನೀಡಿ ಅವಿಶ್ವಾಸ ಮಂಡನೆಗೆ ಸೂಚನೆ ಕೊಟ್ಟಿದ್ದರು. ಅದರನ್ವಯ ಸದಸ್ಯರಿಗೆ ನೋಟಿಸ್ ನೀಡಿ ಜೂ. 30ರಂದು ಅವಿಶ್ವಾಸ ಗೊತ್ತುವಳಿ ಸಭೆ ನಿಗದಿಪಡಿಸಲಾಗಿತ್ತು. ಅದರಂತೆ 10 ಸದಸ್ಯರು 12 ಗಂಟೆಯೊಳಗೆ ಸಭೆಗೆ ಹಾಜರಿರಬೇಕಿತ್ತು. ಆದರೆ ಕೆವಲ 7 ಸದಸ್ಯರು ಹಾಜರಿದ್ದರು. ನಿಯಮದ ಪ್ರಕಾರ, 1 ಗಂಟೆ ಹೆಚ್ಚುವರಿ ಕಾಲಾವಕಾಶ ಕೊಟ್ಟರೂ ಕೊರಂ ಭರ್ತಿಯಾಗಲಿಲ್ಲ. ಈ ವೇಳೆ ಹಾಜರಿದ್ದ ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಅವರು ಸದಸ್ಯರು ಕೊಟ್ಟಿದ್ದ ಅವಿಶ್ವಾಸ ಸಭೆ ವಿಸರ್ಜಿಸಿ ಯಥಾಸ್ಥಿತಿಯಂತೆ ಶಾಂತವ್ವ ಹಡಪದ ಅವರೇ ಅಧ್ಯಕ್ಷೆಯಾಗಿ ಮುಂದುವರಿಯುಂತೆ ಸೂಚಿಸಿದರು.

ಒಟ್ಟು 14 ಸದಸ್ಯರನ್ನೊಳಗೊಂಡ ಸಭೆಗೆ ಗಂಗವ್ವ ಹರಿಜನ, ಗೌರವ್ವ ಸಾವಿರಕುರಿ, ಮಾಲತೇಶ ಹೊಳಲಾಪುರ, ಹನುಮಪ್ಪ ಹರಿಜನ, ಮಂಜವ್ವ ಕಳಸೂರ, ರುದ್ರಯ್ಯ ಶೀಲವಂತಮಠ, ಬಸವರಾಜ ಲಮಾಣಿ ಸಭೆಗೆ ಹಾಜರಾಗಿದ್ದರು. ಇನ್ನು ಶಾಂತವ್ವ ಹಡಪದ, ಮಂಜುನಾಥ ಗೌರಿ, ಮಲ್ಲವ್ವ ತಳವಾರ, ಸುರೇಶ ಲಮಾಣಿ, ಜಗದೀಶಗೌಡ ಪಾಟೀಲ, ಇಂದ್ರವ್ವ ಹರಿಜನ, ಲಲಿತವ್ವ ಲಮಾಣಿ ಗೈರಾಗಿದ್ದರು. ವಿಪರ್ಯಾಸವೆಂದರೆ ಅಧ್ಯಕ್ಷರ ವಿರುದ್ಧ ಅವಿಶ್ವಾಸಕ್ಕೆ 12 ಸದಸ್ಯರು ಅರ್ಜಿ ಸಲ್ಲಿಸಿದ್ದರು.

ಪೋಟೊ: 30-ಎಲ್‌ಎಕ್ಷ್‌ಆರ್-1

ಬಟ್ಟೂರ ಗ್ರಾಪಂ ಅಧ್ಯಕ್ಷೆ ಶಾಂತವ್ವ ಹಡಪದ