ಹುಬ್ಬಳ್ಳಿ: ಮನುಷ್ಯರಾದವರು ತಮ್ಮ ಆಚಾರಗಳನ್ನು ಸರಿಯಾಗಿ ಇಟ್ಟುಕೊಂಡರೆ ದೇವರು ತಾನಾಗಿಯೇ ನಿಮ್ಮ ಕಡೆ ಓಡಿ ಬರುತ್ತಾನೆ. ಜೀವನದಲ್ಲಿ ಕಾಮ ಅಗತ್ಯ. ಆದರೆ, ಅದು ಧರ್ಮ ಸಮ್ಮತವಾಗಿರಬೇಕು. ಜೀವನವನ್ನು ಹೇಗೆ ನಡೆಸಬೇಕೆನ್ನುವುದನ್ನು ಸನಾತನ ಧರ್ಮ ತೋರಿಸಿಕೊಟ್ಟಿದೆ ಎಂದು ಗದಗ ವಿಜಯಪುರ ರಾಮಕೃಷ್ಣಾಶ್ರಮದ ಶ್ರೀ ನಿರ್ಭಯಾನಂದ ಸ್ವಾಮೀಜಿ ಹೇಳಿದರು.
ಇಲ್ಲಿಯ ಅಭಿನವನಗರದ ಆರೂಢಜ್ಯೋತಿ ಶ್ರೀ ಶಾಂತಾಶ್ರಮದ ವತಿಯಿಂದ ಶ್ರೀ ಸಿದ್ಧಾರೂಢಸ್ವಾಮಿ ಮಠದ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ದ್ವಾದಶ ಜ್ಯೋತಿರ್ಲಿಂಗ ಪ್ರಾಣ ಪ್ರತಿಷ್ಠಾಪನೆ, ವೇದಾಂತ ಪರಿಷತ್ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಈ ದೇಶದ ಮಣ್ಣಿನಲ್ಲಿ ಧರ್ಮ ಅಡಗಿದೆ. ಕರ್ಣಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಜೀವನ ನಡೆಸಬೇಕು. ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಮೋಸ, ವಂಚನೆ ಹೆಚ್ಚಾಗಿದೆ. ಇವುಗಳ ಬಗ್ಗೆ ದಾರ್ಶನಿಕರು ಚಿಂತನೆ ಮಾಡಿ ಸಮಾಜಕ್ಕೆ ಸನ್ಮಾರ್ಗ ತೋರಿಸುವ ಅಗತ್ಯವಿದೆ ಎಂದು ಹೇಳಿದರು.
ಮುಂಡರಗಿ ಶ್ರೀ ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿಯವರು ಆರೂಢ ಜ್ಞಾನ ಪಡೆದು ಅದನ್ನು ಪ್ರಸಾರ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರಿಂದ ಇನ್ನಷ್ಟು ಲೋಕಕಲ್ಯಾಣವಾಗಲಿದೆ ಎಂದು ಹೇಳಿದರು.
ಚಿತ್ರದುರ್ಗ ಮಾದಾರಚೆನ್ನಯ್ಯ ಗುರುಪೀಠದ ಜಗದ್ಗುರು ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಇಂದಿನ ಜಗತ್ತು ಅಶಾಂತಿಯಿಂದ ಕೂಡಿದೆ. ಶಾಂತಿ, ಸಹಬಾಳ್ವೆಯೇ ಮುಖ್ಯ ಎಂದು ಸಾಕಷ್ಟು ದಾರ್ಶನಿಕರು ನಮಗೆ ಧರ್ಮದ ತಿರುಳು ಬಿಟ್ಟು ಹೋಗಿದ್ದಾರೆ. ಆದರೂ, ಧರ್ಮ, ಜಾತಿ ಹೆಸರಲ್ಲಿ ಅನೇಕ ಜನರು, ದೇಶಗಳ ಪ್ರಮುಖರು ಕಿತ್ತಾಡುತ್ತಿದ್ದಾರೆ. ಇದನ್ನೆಲ್ಲ ಬಿಟ್ಟು ಸಮಾನತೆಯಿಂದ ಎಲ್ಲರೂ ಬದುಕುವುದನ್ನು ಕಲಿಯಬೇಕು ಎಂದರು.
ನಿಡಸೋಸಿ ಸಿದ್ಧಸಂಸ್ಥಾನ ಮಠದ ಡಾ. ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಮನುಷ್ಯ ದಾರಿ ತಪ್ಪಿದಾಗ ಮಠ, ಮಂದಿರಗಳು ದಾರಿ ತೋರಿಸುವ ಕೆಲಸ ಮಾಡುತ್ತವೆ. ಆಧ್ಯಾತ್ಮಕ್ಕಷ್ಟೇ ಮಠಗಳು ಸೀಮಿತವಾಗಿಲ್ಲ. ಸಂಸಾರಿಕ ಜೀವನದಲ್ಲಿ ಇದ್ದುಕೊಂಡೇ ಶಿವಪೂಜೆ ಮಾಡುತ್ತ, ಕರ್ಣಗಳನ್ನು ಹಸನು ಮಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಶಿವಮೊಗ್ಗದ ಡಾ. ಮಲ್ಲಿಕಾರ್ಜುನ ಮುರುರಾಜೇಂದ್ರ ಸ್ವಾಮೀಜಿ, ಮನುಷ್ಯ ಮನುಷ್ಯನಾಗಿ ಉಳಿದಿಲ್ಲ. ಸಂಬಂಧಗಳು ಕ್ಲೀಷವಾಗುತ್ತಿವೆ. ಇಂದ್ರಿಯಗಳು ಆತನನ್ನು ಆಡಿಸುತ್ತಿವೆ. ಮನುಷ್ಯನಿಗೆ ಸಂಸ್ಕಾರ ಕೊಟ್ಟು ಉದಾತ್ತೀಕರಿಸಿದರೆ ದೇಹವೇ ದೇಗುಲವಾಗುತ್ತದೆ. ಇದಕ್ಕಾಗಿ ಮಠಗಳ ಅಗತ್ಯತೆ ಇದೆ ಎಂದರು.
ವಿವಿಧ ಮಠಾಧೀಶರು ವೇದಿಕೆ ಮೇಲೆ ಆಸೀನರಾಗಿದ್ದರು. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.