ಜಿಲ್ಲೆ

ಪಂಜದಗುತ್ತು ಶಾಂತಾರಾಮ ಶೆಟ್ಟಿ ಇನ್ನಿಲ್ಲ

Dakshina Kannada

ಹಳೆಯಂಗಡಿ: ಹಿರಿಯ ಧಾರ್ಮಿಕ ನೇತಾರ ಪಂಜದಗುತ್ತು ಶಾಂತಾರಾಮ ಶೆಟ್ಟಿ(79) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಭಾರತ್ ಬೀಡಿ ಕಂಟ್ರಾಕ್ಟರ್ ಆಗಿ ಉದ್ಯಮ ಆರಂಭಿಸಿದ ಅವರು ಹಲವಾರು ಉದ್ಯಮಗಳನ್ನು ಯಶಸ್ವಿಯಾಗಿ ಮುನ್ನಡೆಸಿ ಯುವ ಸಮಾಜಕ್ಕೆ ಮಾರ್ಗದರ್ಶಿಯಾಗಿದ್ದರು. ಕೊಡುಗೈ ದಾನಿಯಾಗಿ ಸಮಾಜದ ದೀನ ವರ್ಗಕ್ಕೆ ಸಹಕಾರಿಯಾಗಿದ್ದರು. ಶಿಕ್ಷಣ, ಸಾಂಸ್ಕೃತಿಕ, ಸಾಹಿತ್ಯ, ಯಕ್ಷಗಾನ, ಕಂಬಳ ಹಾಗೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಕಾರಣಕರ್ತರಾಗಿದ್ದರು.

ಕೆಮ್ರಾಳು ಪ್ರೌಢಶಾಲೆ ಸ್ಥಾಪಕರಾಗಿ, ಅಭಿವೃದ್ಧಿಯ ಹರಿಕಾರರಾಗಿ ಇಂದು ಶಾಲೆ ಅವರ ಹೆಸರಿನಲ್ಲಿ ಜನಮನ್ನಣೆ ಗಳಿಸಿದೆ. ಹಳೆಯಂಗಡಿ ನಾರಾಯಣ ಸನಿಲ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಅಧ್ಯಕ್ಷ, ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಸವ ಸಮಿತಿ ಸದಸ್ಯ, ಪಾವಂಜೆ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ, ಹಳೆಯಂಗಡಿ ಮತ್ತು ಪಕ್ಷಿಕೆರೆ ಗಣೇಶೋತ್ಸವ ಸಮಿತಿ ನಾಯಕತ್ವ ವಹಿಸಿ ಮುನ್ನಡೆಸಿದ್ದರು. ಹಳೆಯಂಗಡಿ ಪಿಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ, ಪಂಜ ವಿಠೋಭ ಭಜನಾ ಮಂದಿರ ಪಕ್ಷಿಕೆರೆಯ ಮಹಾಪೋಷಕರಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು.

ಮೂಲ್ಕಿ ಸೀಮೆ ಅರಸರ ಅರಮನೆ ಹಾಗೂ ಬಸದಿ ನವೀಕರಣ ಮತ್ತು ಪುನರ್ ನಿರ್ಮಾಣ ಕಾರ್ಯದಲ್ಲಿ ಕೊಡುಗೈ ದಾನಿಯಾಗಿ ಗಣನೀಯ ಸೇವೆ ಸಲ್ಲಿಸಿದ್ದರು. ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ವಿವಿಧ ಕ್ಷೇತ್ರಗಳ ಜೀರ್ಣೋದ್ಧಾರ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದರು.

ಗಣ್ಯರ ಸಂತಾಪ: ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಯುವ ಮುಖಂಡ ಮಿಥುನ್ ರೈ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಂಕೇಶ್ವರ ಕಂಬನಿ: ವಿಆರ್‌ಎಲ್ ಸಮೂಹ ಸಂಸ್ಥೆಗಳಿಗೆ ಶಾಂತಾರಾಮ ಶೆಟ್ಟಿ ಅವರು ಹಿರಿಯಣ್ಣನಂತೆ ಮಾರ್ಗದರ್ಶಕರಾಗಿದ್ದರು. ಸರಳಜೀವಿಯಾಗಿದ್ದ ಅವರು ಸಮಾಜದ ಒಳಿತಿಗಾಗಿ ಚಿಂತಿಸುತ್ತಿದ್ದರು. ಅವರ ನಿಧನದಿಂದ ನಾವು ಹಿರಿಯ, ಸಜ್ಜನ ಬಂಧುವೊಬ್ಬರನ್ನು ಕಳೆದುಕೊಂಡಿದ್ದೇವೆ. ಕುಟುಂಬ ಸದಸ್ಯರಂತಿದ್ದ ಅವರ ಅಗಲಿಕೆ ನಮಗೆ ದೊಡ್ಡ ನಷ್ಟ. ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ‌್ಮನ್ ಡಾ.ವಿಜಯ ಸಂಕೇಶ್ವರ, ಲಲಿತಾ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕ ಅನಂದ ಸಂಕೇಶ್ವರ ಕಂಬನಿ ಮಿಡಿದಿದ್ದಾರೆ.