ಹೊನ್ನಾಳಿ: ಸರ್ಕಾರಿ ನೌಕರರು ವಿಶೇಷವಾಗಿ ಕಂದಾಯ ಇಲಾಖೆಯ ನೌಕರರು, ಕಚೇರಿಗೆ ಬರುವ ರೈತರ, ಜನಸಾಮಾನ್ಯರ ಕೆಲಸಗಳನ್ನು ಅನಗತ್ಯವಾಗಿ ಅಲೆದಾಡಿಸದೆ ಆದಷ್ಟು ಬೇಗ ಮಾಡಿಕೊಡಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು .
ತಾಲೂಕಿನಲ್ಲಿ ನವೀಕರಣಗೊಂಡ ತಾಲೂಕು ಕಚೇರಿ ಸಭಾಂಗಣವನ್ನು ಸೋಮವಾರ ಲೋಕಾರ್ಪಣೆ ಮಾಡಿ ಮಾತನಾಡಿ, ಈ ಹಿಂದೆ ಸಭಾಂಗಣ ಮಳೆಗಾಲದಲ್ಲಿ ಸೋರುತ್ತಿದ್ದು ಇದೀಗ ನವೀಕರಣಗೊಂಡಿದೆ. ಜತೆಗೆ ಸಭಾಂಗಣದ ಮೇಲ್ಭಾಗದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಒಂದು ದೊಡ್ಡ ಶೆಡ್ ಮಾಡುವ ಉದ್ದೇಶವಿದೆ. ಇದರಿಂದ ಕೆಳಗಿನ ಕಟ್ಟಡಕ್ಕೂ ಸುರಕ್ಷತೆ ದೊರಕುತ್ತದೆ ಎಂದರು.
ತಾಲೂಕು ಕಚೇರಿ ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ವಿುಸುವ ಬೇಡಿಕೆ ಇದ್ದು, ರಸ್ತೆ ಅಗಲೀಕರಣದ ನಂತರ ಈ ಬಗ್ಗೆ ಕ್ರಮವಹಿಸಲಾಗುವುದು. ಮುಂದಿನ ದಿನಗಳಲ್ಲಿ 8.60 ಕೋಟಿ ರೂ. ವೆಚ್ಚದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ ನಿರ್ವಣಕ್ಕೆ ಹಣ ಮಂಜೂರಾಗಲಿದ್ದು, ಆ.15ರ ಒಳಗಾಗಿ ಕೆಲಸ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಅಭಿಷೇಕ್ ಮಾತನಾಡಿ, ಸಾರ್ವಜನಿಕರಿಗೆ ತಾಲೂಕು ಕಚೇರಿಯಲ್ಲಿಯೇ ಶೇ.75 ರಷ್ಟು ಕೆಲಸ ಆಗಬೇಕಿರುತ್ತದೆ, ಅದಕ್ಕಾಗಿ ಗ್ರಾಮೀಣ ಪ್ರದೇಶದಿಂದ ಆಗಮಿಸುತ್ತಾರೆ. ಅವರನ್ನು ಅಲೆದಾಡಿಸದೆ ಕೆಲಸಗಳನ್ನು ಮಾಡಿ ಕೊಡೋಣ ಎಂದರು.
ತಹಸೀಲ್ದಾರ್ ಪಟ್ಟರಾಜಗೌಡ ಮಾತನಾಡಿ, ಸಭಾಂಗಣದ ನವೀಕರಣಕ್ಕೆ ಉದ್ಯಮಿ ಧನಂಜಯ್ ಪಾಟೀಲ್ ಅವರು ಸಹಕರಿಸಿದ್ದಾರೆ. ಅವರಿಗೆ ಇಲಾಖೆ ವತಿಯಿಂದ ಧನ್ಯವಾದ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿದರು. ತಾಪಂ ಇಒ ಪ್ರಕಾಶ್, ಉಪತಹಸೀಲ್ದಾರ್ ಸುರೇಶ್, ಶಿರಸ್ತೇದಾರ್ ಮಂಜುನಾಥ್ ಸೇರಿ ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.