ಜಿಲ್ಲೆ

ಮಾ. 4ರಿಂದ ಶಾಂತಳ್ಳಿ ಶಾಲೆ ಶತಮಾನೋತ್ಸವ

ಎ. ಆರ್. ರಘುರಾಮ

 ಸೋಮವಾರಪೇಟೆ: ತಾಲೂಕಿನ ಶಾಂತಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 100 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಮಾ.4, 5 ಮತ್ತು 6ರಂದು ಅದ್ದೂರಿಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಆಚರಣಾ ಸಮಿತಿ ಅಧ್ಯಕ್ಷ ಎಸ್.ಜಿ. ಮೇದಪ್ಪ ತಿಳಿಸಿದರು.

ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. 1824ರಲ್ಲಿ ಅಂದಿನ ಶಾಸಕರಾಗಿದ್ದ ಮಲ್ಲಪ್ಪ ಅವರು ಶಾಂತಳ್ಳಿ ಹೋಬಳಿ ಕೇಂದ್ರದಲ್ಲಿ ಶಾಲೆ ಪ್ರಾರಂಭಿಸಿ ದ್ದರು. ಈ ಶಾಲೆಗೆ ಶಾಂತಳ್ಳಿ ಹೋಬಳಿಯ ಬೆಟ್ಟದಕೊಪ್ಪ, ಕುಮಾರಳ್ಳಿ, ಹೆಗ್ಗಡಮನೆ, ನಾಡ್ನಳ್ಳಿ, ತೋಳೂರುಶೆಟ್ಟಳ್ಳಿ, ದೊಡ್ಡತೋಳೂರು, ಕುಡಿಗಾಣ ಸೇರಿದಂತೆ ಸಾಕಷ್ಟು ಭಾಗಗಳಿಂದ ಬರುತ್ತಿದ್ದ ಮಕ್ಕಳು ವಿದ್ಯಾಭ್ಯಾಸ ಮಾಡಿ, ಸಮಾಜಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.

ಆರೋಗ್ಯ ತಪಾಸಣೆ: ಮಾ. 4ರಂದು ತಜ್ಞ ಡಾ. ಧನಂಜಯ ಮೇದಪ್ಪ ನೇತೃತ್ವದಲ್ಲಿ ತಜ್ಞ ವೈದ್ಯರ ತಂಡ ಸಾರ್ವಜನಿಕರಿಗೆ ಬೃಹತ್ ಆರೋಗ್ಯ ತಪಾಸಣೆ ಶಿಬಿರ ನಡೆಸಲಿದೆ. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. 5 ರಂದು ಶಾಂತಳ್ಳಿ ಹೋಬಳಿ ಮಟ್ಟದ ವಾಲಿಬಾಲ್, ಕಬಡ್ಡಿ ಹಾಗು ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ನಡೆಸಲಾಗುವುದು ಎಂದು ಎಸ್.ಜಿ. ಮೇದಪ್ಪ ವಿವರಿಸಿದರು.

ಗಣ್ಯರಿಗೆ ಸನ್ಮಾನ: ಮಾ. 6ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಲೆಯಲ್ಲಿ ಕಲಿತು ಸಾಧನೆಗೈದ ಹಳೆಯ ವಿದ್ಯಾರ್ಥಿಗಳು, ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳು, ಹಿರಿಯ ಶಿಕ್ಷಕರಿಗೆ ಸನ್ಮಾನ ಮಾಡಲಾಗುವುದು. 3 ದಿನವೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು. ಇದರೊಂದಿಗೆ ಶಾಲೆಯ ಸ್ಮರಣ ಸಂಚಿಕೆಯನ್ನು ಹೊರತರಲಾಗುವುದು. ಇದಕ್ಕೆ ಕಥೆ, ಕವನ, ಲೇಖನಗಳನ್ನು ಆಸಕ್ತರು ನೀಡಬಹುದು. ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.

ಸಮಿತಿ ಗೌರವಾಧ್ಯಕ್ಷ ರಾಮಚಂದ್ರ, ಖಜಾಂಚಿ ರಾಜಶೇಖರ್, ಆಹಾರ ಸಮಿತಿ ಅಧ್ಯಕ್ಷ ಮನೋಹರ, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಕೆ.ಎಂ. ಕೃಷ್ಣಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ ಗುರು ಪ್ರಸಾದ್, ಶಾಲಾ ಮುಖ್ಯ ಶಿಕ್ಷಕ ಸಿ.ಎಸ್. ಪರಮೇಶ್ವರಸ್ವಾಮಿ ಇತರರು ಇದ್ದರು.