ಮಂಡ್ಯ: ನಗರದ ಶಂಕರೇಗೌಡ ಕಾಲೇಜಿನಲ್ಲಿ 1982-83ನೇ ಸಾಲಿನ ಹಳೆಯ ಬಿಇಡಿ ವಿದ್ಯಾರ್ಥಿಗಳ ಸಂಘದ ವತಿಯಿಂದ ಸಮಾಗಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಲವು ವರ್ಷದ ನಂತರ ಎಲ್ಲರೂ ಒಂದೆಡೆ ಸೇರಿದ್ದರಿಂದಾಗಿ ಹಬ್ಬದಂತೆ ಸಂಭ್ರಮ ಮನೆ ಮಾಡಿತು.
ನಿವೃತ್ತ ಪ್ರಾಂಶುಪಾಲ ವಿ.ಕೆ.ಕೃಷ್ಣಪ್ಪ ಮಾತನಾಡಿ, ಜಿಲ್ಲೆಯ ಯಾವುದೇ ಶಾಲೆಗೆ ಭೇಟಿ ನೀಡಿದರೂ ನಮ್ಮ ಶಂಕರೇಗೌಡ ಬಿಇಡಿ ಕಾಲೇಜಿನ ವಿದ್ಯಾರ್ಥಿಗಳು ಒಬ್ಬರು ಅಥವಾ ಇಬ್ಬರು ಇದ್ದೇ ಇರುತ್ತಾರೆ. ಶಿಕ್ಷಕ ವೃತ್ತಿಯಿಂದ ಸಾಕಷ್ಟು ಸಮಾಧಾನ ಗೌರವ ಎಲ್ಲವೂ ಸಿಗುತ್ತದೆ. ವೃತ್ತಿಯಲ್ಲಿ ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನ್ಯಾಯ ದೊರಕಿಸಿ ಕೊಟ್ಟಂತಾಗುತ್ತದೆ ಎಂದು ಸಲಹೆ ನೀಡಿದರು.
ಹಿರಿಯ ವಿದ್ಯಾರ್ಥಿ ಜಿ.ಎನ್.ಶಿವರುದ್ರ ಮಾತನಾಡಿ, 40 ವರ್ಷದ ಹಿಂದೆ ಶಂಕರೇಗೌಡ ಬಿಇಡಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿದ್ದೇನೆ. 1982-83ನೇ ಸಾಲಿನ ವಿದ್ಯಾರ್ಥಿಗಳು ಒಟ್ಟುಗೂಡಿ ಗುರುವಂದನಾ ಕಾರ್ಯಕ್ರಮ ಮಾಡಬೇಕೆಂದು ತೀರ್ಮಾನಿಸಲಾಯಿತು ಎಂದರು.
ಪ್ರಾಧ್ಯಾಪಕರಾದ ಡಾ.ಎಂ.ಆರ್.ಜಯಪ್ರಕಾಶ್, ಡಾ.ಎಸ್.ಬಿ.ಶಂಕರೇಗೌಡ, ಎಂ.ಕೆ.ನಾಗರಾಜು, ಡಾ.ವಿ.ಡಿ.ಸುವರ್ಣ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಸಂಘದ ಪಿ.ಎನ್.ಗೋಪಾಲಕೃಷ್ಣ ನಾಯರ್, ರಮೇಶ್, ಎಚ್.ವಿ.ಜಯರಾಂ, ಉದಯಶಂಕರ್ ಇತರರಿದ್ದರು.