ಜಿಲ್ಲೆ

ಶಂಕರಣ್ಣ ಮುನವಳ್ಳಿ ಅಮೃತ ಮಹೋತ್ಸವ ಸಂಭ್ರಮ,   ದಣಿವರಿಯದ ಕಾಯಕಯೋಗಿಗೆ ಶುಭಾಶಯಗಳ ಸುರಿಮಳೆ

ಹುಬ್ಬಳ್ಳಿ; ದಣಿವರಿಯದ ಕಾಯಕಯೋಗಿ, ಜನಾನುರಾಗಿ, ಹಿರಿಯಣ್ಣ ಎಂದೇ ಖ್ಯಾತರಾದ ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಈಶ್ವರಪ್ಪ ಮುನವಳ್ಳಿ ಅವರ 75ನೇ ಜನ್ಮದಿನ ಅಂಗವಾಗಿ ಅಮೃತ ಮಹೋತ್ಸವ ಸಮಾರಂಭ ಗಣ್ಯರು, ಸಾವಿರಾರು ಜನ ಅಭಿಮಾನಿಗಳ ಸಮ್ಮುಖದಲ್ಲಿ ಅತ್ಯಂತ ಅದ್ದೂರಿ ಹಾಗೂ ವಿಜೃಂಭಣೆಯಿಂದ ಭಾನುವಾರ ನೆರವೇರಿತು.

ಇಲ್ಲಿಯ ಡೆನಿಸನ್ಸ್ ಹೋಟೆಲ್ ಯಶೋಧನ್ ಲಾನ್ಸ್ ನಲ್ಲಿ ಶಂಕರಣ್ಣ ಮುನವಳ್ಳಿ ಅಮೃತ ಮಹೋತ್ಸವ ಅಭಿನಂದನಾ ಸಮಿತಿ ಏರ್ಪಡಿಸಿದ್ದ ಭವ್ಯ ಕಾರ್ಯಕ್ರಮದಲ್ಲಿ ಭಾಗಿಯಾದ ಅವರ ಅಭಿಮಾನಿಗಳು, ಹಿತೈಷಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅತ್ಯಂತ ಅಭಿಮಾನದಿಂದ ಶಂಕರಣ್ಣ ಅವರನ್ನು ಸನ್ಮಾನಿಸಿ ಇನ್ನೂ ನೂರ್ಕಾಲ ಆರೋಗ್ಯವಂತರಾಗಿ ಬಾಳಿ ಸಮಾಜ ಸೇವೆ ಮಾಡಲಿ ಎಂದು ಹಾರೈಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡಿ, ಶಂಕರಣ್ಣ ಮುನವಳ್ಳಿ ಅವರು ಸಾಮಾನ್ಯ ಕುಟುಂಬದಿಂದ ಬಂದು ತಾವು ಬೆಳೆಯುವುದರೊಂದಿಗೆ ದೊಡ್ಡ ಜವಾಬ್ದಾರಿಗಳನ್ನು ಹೊತ್ತುಕೊಂಡು ಅವುಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಕೆಎಲ್ಇ ಸಂಸ್ಥೆಯ ನಿರ್ದೇಶಕರಾಗಿ, ಗುರುಸಿದ್ದೇಶ್ವರ ಕೋ ಆಪ್ ಬ್ಯಾಂಕ್ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಸ್ಮರಣೀಯವಾಗಿದೆ. ಅವರು ಬಹುತೇಕ ಎಲ್ಲ ಉದ್ಯಮದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅತ್ಯಂತ ಸರಳ ವ್ಯಕ್ತಿತ್ವ, ಸಹೃದಯಿಯಾಗಿದ್ದಾರೆ ಎಂದರು.

ಶಂಕರಣ್ಣ ಮುನವಳ್ಳಿ ದಂಪತಿಯನ್ನು ವಿ ಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ ಅವರು ಆತ್ಮೀಯವಾಗಿ ಸನ್ಮಾನಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ವಿಜಯ ಸಂಕೇಶ್ವರ ಅವರು, ಶಂಕರಣ್ಣ ಮುನವಳ್ಳಿ ಅವರ ಬಗ್ಗೆ ಎಲ್ಲರೂ ಒಳ್ಳೆಯ ಮಾತುಗಳನ್ನು ಆಡಿದ್ದು, ಈ ಮಾತುಗಳಿಗೆ ಅವರು ಯೋಗ್ಯರಾಗಿದ್ದಾರೆ. ಆದರೆ, ಅವರ ಜೀವನ ಪಯಣ ಸುಖಮಯವಾಗಿರಲಿಲ್ಲ. ಅನೇಕ ಏರುಪೇರುಗಳನ್ನು ಕಂಡಿದ್ದಾರೆ. ಅವರ ಜೀವನ ಮುಳ್ಳಿನ ಹಾಸಿಗೆಯಾಗಿತ್ತು. ಅದೆಲ್ಲವನ್ನು ಸಮರ್ಥವಾಗಿ ಎದುರಿಸಿ ಸುಂದರ ಬದುಕು ಕಟ್ಟಿಕೊಂಡವರು. ಸಮಾಜ ಸೇವೆ ಮಾಡಲು ಶಾಸಕ, ಸಂಸದ ಆಗಬೇಕೆಂದಿಲ್ಲ, ಸ್ವ ಇಚ್ಚೆ ಇದ್ದರೆ ಸಾಕು, ಅಧಿಕಾರ ಇಲ್ಲದಿದ್ದರೂ ಸಮಾಜ ಸೇವೆ ಮಾಡಬಹುದು ಎಂಬುದನ್ನು ಶಂಕರಣ್ಣ ತೋರಿಸಿಕೊಟ್ಟಿದ್ದಾರೆ ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಬೆಳಗಾವಿ ಸಂಸದ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ್, ಕಾನೂನು ಸಚಿವ ಎಚ್.ಕೆ. ಪಾಟೀಲ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿದರು.

ಎನಗಿಂತ ಕಿರಿಯರಿಲ್ಲ: ಗೌರವ, ಸನ್ಮಾನ ಸ್ವೀಕರಿಸಿದ ಶಂಕರಣ್ಣ ಮುನವಳ್ಳಿ ಮಾತನಾಡಿ, ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ… ಎಂಬ ಮಾತಿನಂತೆ ಇಷ್ಟು ವರ್ಷ ಸಮಾಜ ಸೇವೆ ಮಾಡಲು ಭಗವಂತ ನನಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ನೀವೆಲ್ಲರೂ ತೋರಿದ ಪ್ರೀತಿ, ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿದ್ದೇನೆ. ದೇವರು ಅವಕಾಶ ಕೊಟ್ಟರೆ ಮುಂಬರುವ ದಿನಗಳಲ್ಲಿ ಬತ್ಲಿ- ಮುನವಳ್ಳಿ ಕಂಪನಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 51 ಜೋಡಿ ಉಚಿತ ಸಾಮೂಹಿಕ ವಿವಾಹ, ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಸೇರಿ ವಿವಿಧ ಸಾಮಾಜಿಕ ಸೇವಾ ಕಾರ್ಯ ಮಾಡುವ ಉದ್ದೇಶ ಇಟ್ಟುಕೊಂಡಿದ್ದೇನೆ. ಇದಕ್ಕೆ ತಮ್ಮೆಲ್ಲರ ಸಹಕಾರ ಬಯಸುತ್ತೇನೆ. ಈ ಸಂದರ್ಭದಲ್ಲಿ ದಿ. ಗಂಗಣ್ಣ ಬತ್ಲಿ, ಸಹೋದರ ಚಂದ್ರಶೇಖರಪ್ಪ ಮುನವಳ್ಳಿ ಅವರನ್ನು ಸ್ಮರಿಸುತ್ತೇನೆ ಎಂದು ಭಾವುಕರಾದರು.

ಸಹಕಾರ ಗುಣ ಮಾದರಿ: ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಶಂಕರಣ್ಣ ಅವರ ಸಹಕಾರ ಗುಣ, ಸೇವಾ ಮನೋಭಾವ ಮಾದರಿಯಾಗಿದೆ. 75 ವರ್ಷ ಸಾರ್ಥಕ ಬದುಕು ಸಾಗಿಸಿದ ಅವರ ಜೀವನ ಇತರರಿಗೆ ಅನುಕರಣೀಯವಾಗಿದೆ. ದೇವರು ಅವರಿಗೆ ಇನ್ನಷ್ಟು ಸೇವೆ ಮಾಡಲು ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.

ಮಾಜಿ ಶಾಸಕ, ಸಹೋದರ ಪರಣ್ಣ ಮುನವಳ್ಳಿ ಸ್ವಾಗತಿಸಿದರು. ಕೆಎಲ್ಇ ತಾಂತ್ರಿಕ ವಿವಿ ಸಮಕುಲಾಧಿಪತಿ ಡಾ. ಅಶೋಕ ಶೆಟ್ಟರ್ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಮುನವಳ್ಳಿ ವಂದಿಸಿದರು.

ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಾಗಲಕೋಟ, ಗಂಗಾವತಿ, ಕೊಪ್ಪಳ ಸೇರಿದಂತೆ ವಿವಿಧೆಡೆಯಿಂದ ಅಭಿಮಾನಿಗಳು ಆಗಮಿಸಿ ವೇದಿಕೆ ಮೇಲೆ ದಂಪತಿ ಸಮೇತ ಆಸೀನರಾಗಿದ್ದ ರತ್ನಾದೇವಿ ಹಾಗೂ ಶಂಕರಣ್ಣ ಮುನವಳ್ಳಿ ಅವರನ್ನು ಅಭಿಮಾನದ ಸನ್ಮಾನಿಸಿದರು.