ಮೈಸೂರು: ಆಧ್ಯಾತ್ಮಿಕ ಪರಂಪರೆಗೆ ಶಂಕರಾಚಾರ್ಯರ ಕೊಡುಗೆ ಅಪಾರವಾಗಿದ್ದು, ತಮ್ಮ ಅಭೂತಪೂರ್ವ ಜೀವನದಲ್ಲಿ ಭಾರತದ ಅಸ್ಮಿತೆಯನ್ನು ಎತ್ತಿ ಹಿಡಿದರು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಶಂಕರಾಚಾರ್ಯರ ತತ್ವಗಳು, ಜೀವನದ ಸಂದೇಶಗಳು ಹೆಚ್ಚು ಜನರನ್ನು ಪ್ರಭಾವಿಸಿದ್ದು, ಇಂದಿಗೂ ಇವರ ತತ್ವಗಳನ್ನು ಅಧ್ಯಯನ ಮಾಡುವವರು ಇದ್ದಾರೆ. ಅವರು ಹೇಳಿದಂತಹ ವಿಚಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವವರನ್ನು ಇಂದಿಗೂ ನಾವು ಕಾಣಬಹುದಾಗಿದೆ ಎಂದು ಹೇಳಿದರು.
ಸಮಾಜದಲ್ಲಿ ಅಸಮಾನತೆಯನ್ನು ತೊಡೆದು ಹಾಕಲು ತಮ್ಮ ತತ್ವಗಳ ಮೂಲಕ ಬೆಳಕು ಚೆಲ್ಲಿದವರು. ಮಹಿಳೆಯರಿಗೆ ನೀಡುತ್ತಿದ್ದ ಗೌರವ ಅಪಾರವಾದದ್ದು, ಸಮಾಜದಲ್ಲಿ ಒಟ್ಟಾಗಿ ಇರಬೇಕು. ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆ ಪಡೆದುಕೊಳ್ಳಬೇಕು ಎಂಬ ಆಸೆ ಹೊಂದಿದ್ದವರು. ದೇಶದ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿಯೇ ಪರ್ಯಟನೆ ಮಾಡಿ 4 ಪೀಠಗಳನ್ನು ಸ್ಥಾಪನೆ ಮಾಡಿರುವ ಮಹಾನುಭಾವ ಅವರು ಎಂದು ಹೇಳಿದರು.
ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಜ್ಞಾನಯೋಗಾನಂದ ಮಹಾರಾಜ್ ಮಾತನಾಡಿ, ವೇದ ವೇದಗಳ ಮಹತ್ವವನ್ನು ಭಾರತದ ಐತಿಹಾಸಿಕ ಸನ್ನಿವೇಶದಲ್ಲಿ ಮರುಸ್ಥಾಪನೆ ಮಾಡಿದವರು ಶಂಕರಾಚಾರ್ಯರು ಎಂದು ಹೇಳಿದರು.
ಆಧ್ಯಾತ್ಮಿಕ ಪರಂಪರೆಗೆ ಇವರ ಕೊಡುಗೆ ಅಪಾರವಾಗಿದ್ದು, ತಮ್ಮ ಅಭೂತಪೂರ್ವಾದ ಜೀವನದಲ್ಲಿ ಭಾರತದ ಅಸ್ಮಿತೆಯನ್ನು ಎತ್ತಿ ಹಿಡಿದರು. ಪರಮಾತ್ಮನ ಆದರ್ಶವನ್ನು ಕಟ್ಟಿಕೊಂಡು ಜಗತ್ತಿನಲ್ಲಿ ಬದುಕುವುದು ಹೇಗೆ ಎಂಬುದನ್ನು ಅತ್ಯಂತ ಪ್ರಾಯೋಗಿಕವಾಗಿ ತೋರಿಸಿಕೊಟ್ಟವರು ಶಂಕರಾಚಾರ್ಯರು ಎಂದು ಬಣ್ಣಿಸಿದರು.
ಅವರು ಜಗತ್ತನ್ನು ಮಿಥ್ಯ ಎಂದು ತಿಳಿದು ಪೂರ್ಣವಾಗಿ ನಿರ್ಲಕ್ಷೃ ಮಾಡಿದಿದ್ದರೆ ಭಾರತದ ನಾಲ್ಕು ಮೂಲೆಗಳಲ್ಲಿ ಅತ್ಯಂತ ಸಾಂಪ್ರದಾಯಿಕವಾಗಿ ಕಟ್ಟುನಿಟ್ಟಾಗಿ ಹಾಗೂ ತಾತ್ವಿಕವಾಗಿ ಪರಿಶುದ್ಧವಾದ ವೈದಿಕ ಸಂಪ್ರದಾಯವನ್ನು ಮುನ್ನಡೆಸಲು ನಾಲ್ಕು ಪೀಠಗಳ ಸ್ಥಾಪನೆ ಆಗುತ್ತಿರಲಿಲ್ಲ ಎಂದು ತಿಳಿಸಿದರು.
ಶಂಕರಾಚಾರ್ಯರು ತತ್ವಗಳಿಗೆ ಎಷ್ಟು ಆದರ್ಶವಾಗಿದ್ದರೋ ಹಾಗೆಯೇ ಅವರು ಪ್ರಾಯೋಗಿಕವಾಗಿಯೂ ಸಹ ಇದ್ದರು. ಮನುಕುಲಕ್ಕೆ ಅವರ ಕೊಡುಗೆ ಅಪಾರವಾದದ್ದು, ತಾತ್ವಿಕ ದೃಷ್ಟಿಯಿಂದ ಧಾರ್ಮಿಕ ದೃಷ್ಟಿಯಿಂದ ಆಚರಣೆಯ ದೃಷ್ಟಿಯಿಂದ ಅವರು ಅದ್ವೈತ ಸಿದ್ಧಾಂತವನ್ನು, ವೇದಾಂತವನ್ನು ನಮ್ಮ ಜೀವನದಲ್ಲಿ ಯಾವ ರೀತಿ ಆದರ್ಶವಾಗಿ ರೂಢಿಸಿಕೊಳ್ಳಬೇಕು ಎನ್ನುವುದನ್ನು ಅವರು ತಿಳಿಸಿಕೊಟ್ಟಿದ್ದಾರೆ ಎಂದರು.
ವಿದುಷಿ ಎಂ.ಸಿ. ನಾಗಲಕ್ಷ್ಮೀ ಮಾತನಾಡಿ, ಶಂಕರಾಚಾರ್ಯರು 32 ವರ್ಷ ಮಾತ್ರ ಬದುಕಿದ್ದರು ಸಹ ಇವರ ಕೊಡುಗೆ ಅಪಾರವಾದದ್ದು, ಇವರು ಸಂತರಲ್ಲಿಯೇ ಅಗ್ರ ಗಣ್ಯರಾಗಿದ್ದರು, ಪ್ರಪಂಚದಲ್ಲಿಯೇ ಪ್ರಚಂಡ ಮಹಾನ್ ಜ್ಞಾನಿಯಾಗಿದ್ದರು, ತೀಕ್ಷ್ಣಬುದ್ಧಿಯನ್ನು ಹೊಂದಿದ್ದರು ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ನಗರಪಾಲಿಕೆ ಮಾಜಿ ಸದಸ್ಯ ಮಾ.ವಿ.ರಾಮಪ್ರಸಾದ್, ಮುಖಂಡರಾದ ಕೆ.ರಘುರಾಮ್ ವಾಜಪೇಯಿ, ಶ್ರೀಕಂಠ ಕುಮಾರ್, ನವೀನ್ ಕುಮಾರ್, ಕರ್ನಾಟಕ ಕಾವಲು ಪಡೆಯ ಅಧ್ಯಕ್ಷ ಕೆ. ಮೋಹನ್ ಕುಮಾರ್‌ಗೌಡ, ಅರವಿಂದ್ ಶರ್ಮಾ ಇತರರು ಇದ್ದರು.