ಅರಸೀಕೆರೆ: ಭಾರತೀಯ ಸನಾತನ ಸಂಸ್ಕೃತಿ ಹಾಗೂ ಪರಂಪರೆಯನ್ನು ಜಗತ್ತಿಗೆ ಪಸರಿಸಿದ ಕೀರ್ತಿ ಆದಿ ಜಗದ್ಗುರು ಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂದು ಕೆ.ಆರ್.ನಗರ ತಾಲೂಕಿನ ಯಡತೊರೆ ಯೋಗನಂದೀಶ್ವರ ಸರಸ್ವತಿ ಮಠದ ಶ್ರೀ ಶಂಕರಭಾರತಿ ಸ್ವಾಮೀಜಿ ಹೇಳಿದರು.
ಸಿದ್ದಪ್ಪ ನಗರ ಬಡಾವಣೆಯಲ್ಲಿರುವ ಶ್ರೀ ಮಾರುತಿ ಸಚ್ಚಿದಾನಂದ ಸೇವಾಶ್ರಮದಲ್ಲಿ ಗುರುವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಸ್ರಾರು ವರ್ಷಗಳ ಹಿಂದೆಯೇ ಶಂಕರಾಚಾರ್ಯರು ಕಾಲ್ನಡಿಗೆ ಮೂಲಕ ದೇಶದ ಉದ್ದಗಲಕ್ಕೂ ಸಂಚರಿಸಿ ಜನರಲ್ಲಿ ಧಾರ್ಮಿಕ ಚಿಂತನೆ ಮೂಡಿಸುವ ಕಾರ್ಯ ಮಾಡಿದ್ದಾರೆ. ಪಂಚರತ್ನದ ಮೂಲಕ ಸಂಸಾರ ಜಂಜಾಟದಿಂದ ಪಾರಾಗಿ ಸುಜ್ಞಾನದ ಬೆಳಕಿನಲ್ಲಿ ಸಾಗುವ ಸಂದೇಶ ನೀಡಿದ್ದಾರೆ ಎಂದು ಹೇಳಿದರು.
ಸತ್ಕಾರ್ಯಗಳಿಂದ ಮಾತ್ರವೇ ಭಗವಂತನ ಸಾನ್ನಿಧ್ಯ ಪಡೆಯಲು ಸಾಧ್ಯ ಎಂಬುದನ್ನು ನಾವೆಲ್ಲರೂ ಮನಗಾಣಬೇಕು. ಮಾನವ ಜನ್ಮ ಅತ್ಯಂತ ಶ್ರೇಷ್ಠವಾಗಿದ್ದು ನಮ್ಮ ಕರ್ತವ್ಯದ ಫಲದಿಂದ ಸಾರ್ಥಕಗೊಳಿಸಿಕೊಳ್ಳಬೇಕು. ಅಂಥ ಮಹತ್ವದ ಧರ್ಮ ಸಂದೇಶವನ್ನು ನಾವುಗಳು ಮರೆತು ಬಾಳಿದರೆ ಪೂಜೆ, ಹವನ ಹೋಮಾದಿಗಳ ಪೂಜೆ, ಪುನಸ್ಕಾರ ಮಾಡಿದರೂ ಪರಿಪೂರ್ಣವಾದ ಪುಣ್ಯದ ಫಲ ಸಿಗಲಾರದು ಎನ್ನುವ ಸತ್ಯವನ್ನು ಅರಿತು ನಾವುಗಳು ಸನ್ಮಾರ್ಗದಲ್ಲಿ ಕರ್ತವ್ಯವನ್ನು ಪಾಲಿಸಿ ಮುನ್ನಡೆದರೆ ಭಗವಂತನ ಆಶೀರ್ವಾದ ಖಂಡಿತ ಲಭ್ಯ ಆಗುತ್ತದೆ ಎಂದು ಶ್ರೀಗಳು ಹೇಳಿದರು.
ಆಶ್ರಮದ ಪ್ರಧಾನ ಅರ್ಚಕರಾದ ಆದಿತ್ಯಶರ್ಮ ಮಾತನಾಡಿ, ಶ್ರೀ ಮಾರುತಿ ಸಚ್ಚಿದಾನಂದ ಆಶ್ರಮದಲ್ಲಿನ ಪರಂಪರ ಅವಧೂತರಾದ ಶ್ರೀಸತೀಶ್ ಶರ್ಮ ಗುರೂಜಿಗಳ ನೇತೃತ್ವದಲ್ಲಿ ವೈಶಿಷ್ಟಪೂರ್ಣವಾಗಿ ನಿರ್ಮಿಸಿರುವ ವಿಷ್ಣು ಪಂಚಾಯಿತಿ ದೇವಾಲಯದಲ್ಲಿ ಲಕ್ಷ ಮೋದಕ ಗಣಪತಿ ಹೋಮ, ಲಕ್ಷ ಕದಳಿ ಮಧು ಮಿಶ್ರಿತ ಹನುಮಾನ ಯಜ್ಞ, ಮಹಾ ಚಂಡಿಕಾ ಯಾಗ ಅತಿರುದ್ರ ಮಹಾಯಾಗ ಸೇರಿದಂತೆ ಲೋಕಕಲ್ಯಾಣಾರ್ಥವಾಗಿ ಹಲವು ಧಾರ್ಮಿಕ ಪೂಜಾ ಸಮಾರಂಭಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಗಿದೆ. ಅವಧೂತ ಗುರೂಜಿಗಳ ತಪೋನಿಷ್ಠೆ, ದೈವ ಶ್ರದ್ಧೆ, ವೈರಾಗ್ಯದ ಫಲವಾಗಿ ಶ್ರೀಕ್ಷೇತ್ರವು ಧಾರ್ಮಿಕ ಶ್ರದ್ಧಾಕೇಂದ್ರವಾಗಿ ಬೆಳೆಯುತ್ತಿರುವುದು ಸಂತಸವನ್ನು ಉಂಟು ಮಾಡಿದೆ ಎಂದರು.
ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸೀತಾ ಮಹಿಳಾ ಸಂಘದ ಅಧ್ಯಕ್ಷರು ಮತ್ತು ಪದಾದಿಕಾರಿಗಳು, ಶ್ರೀ ಲಕ್ಷ್ಮೀನರಸಿಂಹ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅವಧೂತ ಶಿಷ್ಯ ಬಳಗದ ಸದಸ್ಯರು ಸೇರಿದಂತೆ ನೂರಾರು ಭಕ್ತರು ಶ್ರೀಗಳಿಂದ ಫಲ ಮಂತ್ರಾಕ್ಷತೆಯೊಂದಿಗೆ ಆಶೀರ್ವಾದ ಪಡೆದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀಗಳನ್ನು ಪೂರ್ಣ ಕುಂಭ ಸ್ವಾಗತ ನೀಡಲಾಯಿತು.