ಮಂಡ್ಯ: ಶಂಕರಾಚಾರ್ಯರು ಸುಮಾರು 1,300 ವರ್ಷದ ಹಿಂದೆಯೇ ಜೀವನದ ಸತ್ಯವನ್ನು ಬೋಧಿಸಿದರು. ಮಾತ್ರವಲ್ಲದೆ ಸತ್ಯ ಮತ್ತು ಅಸತ್ಯದ ಅರಿವನ್ನು ಸಮಾಜಕ್ಕೆ ತಿಳಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಮಾನವನ ರೋಷ ಹಾಗೂ ಆವೇಶಕ್ಕೆ ಕಾರಣ ಸತ್ಯ ತಿಳಿಯದೆ ನಿರ್ಣಯಿಸುವ ನಿರ್ಧಾರಗಳಾಗಿರುತ್ತದೆ. ಸತ್ಯ ಮತ್ತು ಅಸತ್ಯವನ್ನು ಅರಿಯುವವನಲ್ಲಿ ರೋಷ ಆವೇಶಕ್ಕೆ ಅವಕಾಶವಿರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರು ಸತ್ಯದ ಹಾದಿಯಲ್ಲಿ ಸಾಗಬೇಕು ಎಂದು ತಿಳುವಳಿಕೆ ಹೇಳಿದರು.
ಮಾನವನ ಜನ್ಮ ಎನ್ನುವುದು ಶ್ರೇಷ್ಟ. ನಮ್ಮ ಬದುಕಿನಲ್ಲಿ ಇಂತಹ ಮಹನೀಯರ ತತ್ವ, ಆದರ್ಶಗಳನ್ನು ಅಳವಡಿಸಿಕೊಂಡಾಗ ಬದುಕಿಗೆ ಅರ್ಥ ಸಿಗುತ್ತದೆ. ಜಗತ್ತಿನಲ್ಲಿ ಶ್ರೀಮಂತ, ಬಡವ, ಜಾತಿ, ಮೇಲು ಮತ್ತು ಕೀಳು ಎನ್ನುವಂತಹದ್ದು ಯಾವುದು ಇಲ್ಲ. ಎಲ್ಲವನ್ನು ಮಾನವನೇ ಸೃಷ್ಟಿಸಿ, ಅಸತ್ಯವನ್ನು ಸತ್ಯ ಎಂದು ಸಾರಿದ್ದಾರೆ. ಆ ಒಂದು ಚಿಂತನೆಯನ್ನು ಹೋಗಲಾಡಿಸಲು ಶಂಕರಾಚಾರ್ಯರ ತತ್ವ- ಬೋಧನೆಗಳನ್ನು ಅನುಸರಿಸಬೇಕು. ಇಂದಿನ ಪೀಳಿಗೆಯವರು ಮಹನೀಯರ ಚಿಂತನೆ, ತತ್ವ ಮತ್ತು ಆದರ್ಶ ಅರಿಯುವುದರ ಜತೆಗೆ ಅಳವಡಿಸಿಕೊಳ್ಳಬೇಕಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಮಹನೀಯರ ಜಯಂತಿ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಬಿ.ವಿ.ನಂದೀಶ್, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ರೋಹಿಣಿ, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಇತರರಿದ್ದರು.