ಜಿಲ್ಲೆ

ವೇದಾಂತ ಶಾಸ್ತ್ರಕ್ಕೆ ಶಂಕರಾಚಾರ್ಯ ಪ್ರೋತ್ಸಾಹ

ಅವಿನಾಶ್ ಜೈನಹಳ್ಳಿ

ಮೈಸೂರು: ಜನರಿಗೆ ಕಠಿಣವೆನಿಸಿದ್ದ ವೈದಿಕ ಗ್ರಂಥಗಳ ಗಾಢವಾದ ಅರ್ಥವನ್ನು ಸ್ಪಷ್ಟೀಕರಿಸಿ, ವಿಸ್ತೃತವಾದ ವ್ಯಾಖ್ಯಾನವನ್ನು ಶಂಕರರು ಅನುಗ್ರಹಿಸಿದರು ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಹೇಳಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ನಗರದ ಕೃಷ್ಣಮೂರ್ತಿಪುರಂನ ಶ್ರೀರಾಮ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಆದಿ ಗುರು ಶಂಕರಾಚಾರ್ಯ ಹಾಗೂ ಶ್ರೀ ರಾಮಾನುಜಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತೀಯ ಪ್ರಜ್ಞಾ ಪರಂಪರೆಯಲ್ಲಿ ಶಿಖರಪ್ರಾಯವಾಗಿ ಕಾಣಿಸಿಕೊಂಡವರು ಆಚಾರ್ಯ ಶಂಕರರು. ತಮ್ಮ ಭಾಷ್ಯಗ್ರಂಥಗಳ ಕುರಿತಾದ ವೃತ್ತಿ ಮತ್ತು ವಾರ್ತಿಕೆಗಳನ್ನು ರಚಿಸಲು ವಿದ್ವಾಂಸರನ್ನು ಪ್ರೊತ್ಸಾಹಿಸಿ ವೇದಾಂತ ಶಾಸ್ತ್ರ ಸಿದ್ಧಾಂತಗಳ ವಿಸ್ತೃತ ಪ್ರಚಾರಕ್ಕೆ ಪ್ರೋತ್ಸಾಹವಿತ್ತರು ಎಂದರು.

ಜಾತಿ, ಮತ, ವರ್ಗ, ಲಿಂಗ ಭೇದವಿಲ್ಲದೆ ಎಲ್ಲರೂ ಮುಕ್ತಿ ಮಾರ್ಗದಲ್ಲಿ ಹೋಗಬಹುದೆಂಬುದನ್ನು ಸಾರಿದವರು. ಕರ್ನಾಟಕಕ್ಕೂ ಆಗಮಿಸಿ ಸುಮಾರು 32 ವರ್ಷ ಈ ನಾಡಿನಾದ್ಯಂತ ಸಂಚರಿಸಿ ಭಕ್ತಿಯನ್ನು ಎಲ್ಲ ವರ್ಗದವರಿಗೂ ಪರಿಚಯಿಸಿದ ಸಂತರು ಎಂದು ಹೇಳಿದರು.

ಅರ್ಚಕರ ಸಂಘದ ಅಧ್ಯಕ್ಷ ವಿದ್ವಾನ್ ಕೃಷ್ಣಮೂರ್ತಿ, ಗ್ರಾಮಾಂತರ ಅಧ್ಯಕ್ಷ ಗೋಪಾಲ್‌ರಾವ್, ಮುಖಂಡರಾದ ಓಂ ಶ್ರೀನಿವಾಸ್, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕಡಕೋಳ ಜಗದೀಶ್, ಮಹೇಶ್‌ಕುಮಾರ್ ಇತರರಿದ್ದರು.