ಶ್ರೀ ಶಂಕರ ಜಯಂತಿ ನಿಮಿತ್ತ ಶ್ರೀ ಶಂಕರ ಭಗವತ್ಪಾದರ ಮೂರ್ತಿಗೆ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ, ಜಗದ್ಗುರು ಶ್ರೀ ವಿದುಶೇಖರ ಭಾರತೀ ಸ್ವಾಮೀಜಿ ಕನಕಾಭಿಷೇಕ ನೆರವೇರಿಸಿದರು.  
ಜಿಲ್ಲೆ

ಶೃಂಗೇರಿಯಲ್ಲಿ ಶಂಕರ ಜಯಂತಿ ಸಂಭ್ರಮ

Shivamogga - Desk - Vinayakumar D B

ಶೃಂಗೇರಿ: ಶ್ರೀ ಶಾರದಾ ಪೀಠದಲ್ಲಿ ಭಾನುವಾರ ಶ್ರೀ ಶಂಕರ ಜಯಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಬೆಳಗ್ಗೆ 8ರಿಂದ 12.30ರ ತನಕ ಶ್ರೀ ಶಂಕರ ಭಗವತ್ಪಾದ ಮೂರ್ತಿಗೆ ಮಹಾನ್ಯಾಸ ಪೂರ್ವಕ ಶತರುದ್ರಾಭಿಷೇಕ, ಸಹಸ್ರನಾಮಾರ್ಚನೆ, ಚತುರ್ವೇದ-ಪ್ರಸ್ಥಾನತ್ರಯಭಾಷ್ಯ-ವಿದ್ಯಾರಣ್ಯ ವೇದಭಾಷ್ಯ-ಶ್ರೀ ಶಂಕರ ದಿಗ್ವಿಜಯ ಇತ್ಯಾದಿ ಪಾರಾಯಣಗಳನ್ನು ಶ್ರೀ ಮಠದ ಋತ್ವಜರು ಪಠನ ಮಾಡಿದರು.
ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಶ್ರೀ ಶಂಕರಾಚಾರ್ಯರ ಮೂರ್ತಿಗೆ ಪಂಚಾಮೃತ ಅಭಿಷೇಕ, ವಿವಿಧ ಪುಪ್ಪಗಳನ್ನು ಸಮರ್ಪಿಸಿ ಸಾಲಂಕೃತಗೊಂಡ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಸಾಯಂಕಾಲ ವೇದ ಸ್ವಸ್ತಿವಾಚನ ಮತ್ತು ಶ್ರೀ ಶಂಕರ ದಿಗ್ವಿಜಯ ಪಾರಾಯಣ, ಭಗವತ್ಪಾದರ ಮೂರ್ತಿಗೆ ಮಹಾಮಂಗಳಾರತಿ ಮುಂತಾದ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಸೋಮವಾರ ಶ್ರೀ ಶಂಕರಾಚಾರ್ಯರ ಮಹಾರಥೋತ್ಸವ ನೆರವೇರಲಿದೆ.
ಕಿಕ್ರೆ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ, ಉಳುವೆಬೈಲು ಶ್ರೀ ಪ್ರಸನ್ನ ದೇವಸ್ಥಾನದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ವಿಪ್ರ ವೇದಿಕೆಯಿಂದ ಶ್ರೀ ಶಂಕರಾಚಾರ್ಯರ ಭಾವಚಿತ್ರ ಇರಿಸಿ, ವಿವಿಧ ಪುಷ್ಪಗಳಿಂದ ಅಲಂಕರಿಸಿ, ಹಣ್ಣುಗಳನ್ನು ಸಮರ್ಪಿಸಿ ಪೂಜೆ ಸಲ್ಲಿಸಲಾಯಿತು. ಶ್ರೀ ಭಗವತ್ಪಾದರು ರಚಿಸಿದ ಸ್ತೋತ್ರಗಳನ್ನು ಪಠಿಸಿ ಸದ್ಭಕ್ತರು ಪೂಜೆ ಸಲ್ಲಿಸಿದರು.