ಕುಶಾಲನಗರ:
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡೆಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೈಶ್ವರ ಸ್ವಾಮಿ ದೇವಸ್ಥಾನ ವತಿಯಿಂದ ಶನೈಶ್ವರ ಸ್ವಾಮಿ ಜಯಂತಿ ಮಂಗಳವಾರ ಬೆಳಗ್ಗಿನಿಂದಲೇ ವಿವಿಧ ಹೋಮ, ಹವನ ಸೇರಿದಂತೆ ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು.
ಜಯಂತಿಯ ಅಂಗವಾಗಿ ದೇವಾಲಯದ ಆವರಣದಲ್ಲಿ ಗಣಯಾಗ, ಸಗ್ರಹಾಮಕ ಶನಿ ಶಾಂತಿ ಹೋಮ, ನವಕಲಶಾರಾಧನೆ, ಪ್ರಧಾನ ಹೋಮ, ಸ್ವಾಮಿಗೆ ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ ಸೇರಿದಂತೆ ವಿಶೇಷ ಹೋಮ ಹವನಗಳು ನಡೆದವು. ನಂತರ 12 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ಕಾರ್ಯಕ್ರಮ ಏರ್ಪಡಸಲಾಗಿತ್ತು.
ಸಂಜೆ 4.30 ಗಂಟೆಗೆ ಶ್ರೀ ಶನೈಶ್ಚರ ಸ್ವಾಮಿ ವಿಗ್ರಹವನ್ನು ರಥದಲ್ಲಿ ಕುಳ್ಳಿರಿಸಿ ದೇವಾಲಯದಿಂದ ಹಾರಂಗಿ ನದಿಯ ವರೆಗೆ ಮಂಗಳ ವಾದ್ಯಗಳೊಂದಿಗೆ ಸಾಗಿ ನದಿಯಲ್ಲಿ ಶ್ರೀ ಸ್ವಾಮಿಗೆ ಗಂಗಾ ಸ್ನಾನ, ರಂಗ ಪೂಜೆ ನಡೆಸಿ ನಂತರ ಮೆರವಣಿಗೆಯ ಮೂಲಕ ಸ್ವ ಸ್ಧಳಕ್ಕೆ ಬರಲಾಯಿತು. ಪೂಜಾ ಕೈಂಕರ್ಯಗಳನ್ನು ಗೋಪಾಲ ಕೃಷ್ಣ ಉಡುಪ ಮತ್ತು ತಂಡದವರು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖರಾದ ಎಸ್.ಆರ್. ಸುನಿಲ್ ರಾವ್, ಕೂಡಿಗೆ ಸಹಕಾರ ಸಂಘದ ನಿರ್ದೇಶಕ ಎಸ್.ಆರ್. ಅರುಣ್ ರಾವ್, ನಾಗರಾಜು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.