ವಿಜಯಪುರ: ಸಾಧನೆ ಮಾಡದೆ ಸತ್ತರೆ ಸಾವಿಗೆ ಅವಮಾನ ಮಾಡಿದಂತೆ. ಆದರ್ಶ ಇಲ್ಲದೇ ಬದುಕಿದರೆ ಬದುಕಿಗೆ ಅವಮಾನ ಮಾಡಿದಂತೆ ಎಂದು ರಾಷ್ಟ್ರೀಯ ಯುವ ಯೋಜನೆ ಸಂಯೋಜಕ ಡಾ.ವಿ. ಪ್ರಶಾಂತ್ ತಿಳಿಸಿದರು.
ಪಟ್ಟಣದ ಶಿಡ್ಲಘಟ್ಟ ಕ್ರಾಸ್‌ನಲ್ಲಿರುವ ಇನ್‌ಸ್ಪೈರ್ ಪ್ರಥಮ ದರ್ಜೆ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ, ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಕಾಮರ್ಸ್ ಹಾಗೂ ಶ್ರೀ ವಿನಾಯಕ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಮಾತನಾಡಿದರು.
ಇಂದಿನ ಯುವ ಜನತೆ ಸಾಮಾಜಿಕ ಜಾಲತಾಣದ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಅವರ ಗುಣ ನಡತೆ ಭಯಹುಟ್ಟಿಸುತ್ತದೆ. ಬದುಕಿಗೆ ಬೇಕಾದ ಆದರ್ಶ ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಪ್ರಾಂಶುಪಾಲ ಎನ್. ಶ್ರೀನಿವಾಸಮೂರ್ತಿ ಮಾತನಾಡಿ, ಎಲ್ಲಿ ಸಂಸ್ಕಾರ, ವಿವೇಕ ಇರುವುದಿಲ್ಲವೋ ಅಲ್ಲಿ ಮಾನವೀಯತೆ ಬತ್ತಿ ಹೋಗುತ್ತದೆ. ಸ್ವಾಮಿ ವಿವೇಕಾನಂದರ ಅಂತಃಕರಣ ಮಾನವೀಯ ಮೌಲ್ಯಗಳಿಗಾಗಿ ತುಡಿಯುತ್ತಿತ್ತು ಎಂದರು.
ಆತ್ಮನಿರ್ಭರ ಭಾರತದೆಡೆಗೆ ವಿವೇಕಾನಂದರ ಚಿಂತನೆಗಳು ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಿಲ್ಪಾ ಜೆ.ವಿ., ಯುಕ್ತಿ ಮತ್ತು ವೆಂಕಟಮ್ಮ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. ಕರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಲ್ಲಿಸಿದ ಸೇವೆಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಕು. ರಜಿನಿ, ಮಂಜುನಾಥ ಎನ್. ಮತ್ತು ಶ್ರೀನಿವಾಸಮೂರ್ತಿ ಎನ್. ಅವರಿಗೆ ಕರೊನಾ ವಾರಿಯರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.