ಮಡಿಕೇರಿ: ವಿಜಯ ಸಂಕಲ್ಪ ಯಾತ್ರೆಯ ಪ್ರಚಾರದ ಸಂದರ್ಭ ಗೋಣಿಕೊಪ್ಪಲಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ಭಾವಚಿತ್ರವನ್ನು ಡಾ.ಅಂಬೇಡ್ಕರ್‌ರವರ ಭಾವಚಿತ್ರದ ಮೇಲೆ ಅಂಟಿಸಿ ಅವಮಾನ ಮಾಡಲಾಗಿದೆ ಎಂದು ದಸಂಸ ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಕ್ಕೆ ಸಂವಿಧಾನವನ್ನು ಕೊಟ್ಟ ಮಹಾಪುರುಷ ಅಂಬೇಡ್ಕರ್‌ರವರ ಭಾವಚಿತ್ರದ ಮೇಲೆ ಬೊಮ್ಮಾಯಿ ಅವರ ಭಾವಚಿತ್ರವನ್ನು ದುರುದ್ದೇಶಪೂರ್ವಕವಾಗಿಯೇ ಅಳವಡಿಸಲಾಗಿದೆ. ನಡೆದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷರು, ಇಲ್ಲವೆ ಜಿಲ್ಲೆಯ ಜನಪ್ರತಿನಿಧಿಗಳು ಬಹಿರಂಗ ಕ್ಷಮೆಯಾಚನೆ ಮಾಡಬೇಕು. ಇಲ್ಲವಾದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ದಲಿತ ಸಂಘರ್ಷ ಸಮಿತಿ ಪ್ರಚಾರ ನಡೆಸುವ ಮೂಲಕ, ಆ ಪಕ್ಷವನ್ನು ಸೋಲಿಸುವ ಕೆಲಸ ಮಾಡುತ್ತದೆ ಎಂದು ಹೇಳಿದರು.
ದಸಂಸ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ಮಾತನಾಡಿ, ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ದಲಿತ ಸಮೂಹಕ್ಕೆ ಪ್ರಾಧಾನ್ಯತೆಯನ್ನು ನೀಡುತ್ತಿಲ್ಲ. ಈ ಹಿಂದಿನ ಕಾಂಗ್ರೆಸ್, ಜೆಡಿಎಸ್ ಅಧಿಕಾರದ ಅವಧಿಯಲ್ಲಿ ದಲಿತರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ, ಬಿಜೆಪಿ ಸರ್ಕಾರದಲ್ಲಿ ಅಂತಹ ಅವಕಾಶ ನೀಡಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಪಕ್ಷದ ಗೆಲುವಿಗೆ ದಲಿತ ಸಮೂಹವೇ ನಿರ್ಣಾಯಕವೆಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಸಂಸ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಎಚ್.ಕೆ.ಗಣೇಶ್, ನಗರ ಸಂಚಾಲಕ ಸಿ.ಪಿ.ಸಿದ್ದೇಶ್ ಹಾಗೂ ಚೇರಂಬಾಣೆ ಗ್ರಾಮ ಸಮಿತಿ ಅಧ್ಯಕ್ಷ ಮನೋಜ್ ಕುಮಾರ್ ಉಪಸ್ಥಿತರಿದ್ದರು.