ಹೊಸಪೇಟೆ: ರಾಜ್ಯ ಸರ್ಕಾರದಲ್ಲಿ ಲಿಂಗಾಯತ ಶಾಸಕರು, ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯ ಹಿಂದೆ ಯಾರೋ ಇದ್ದಾರೆ. ಇಲ್ಲಾಂದರೆ ಪಕ್ಷದ ವಿರುದ್ಧ ಅಂತಹ ಹೇಳಿಕೆ ನೀಡುವವರಲ್ಲ ಎಂದು ಕೆಎಂಎಫ್ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಭೀಮಾ ನಾಯ್ಕ ಹೇಳಿದರು.
ನಗರದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆಗೆ ಶುಕ್ರವಾರ ನಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಯಾವ ಲಿಂಗಾಯತ ನಾಯಕರಿಗೂ ಸಮಸ್ಯೆಯಾಗಿಲ್ಲ. ಎಲ್ಲ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಕ್ಷೇತ್ರ, ತಮ್ಮ ಜಿಲ್ಲೆಗೆ ತಮ್ಮದೇ ಸಮುದಾಯದ ಅಧಿಕಾರಿಗಳನ್ನು ಕೊಡಿ ಎಂಬ ಬೇಡಿಕೆಯಿಟ್ಟರೆ, ಯಾರೇ ಮುಖ್ಯಮಂತ್ರಿ ಆಗಿದ್ದರೂ ಸರ್ಕಾರ ನಡೆಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಶಾಮನೂರು ಶಿವಶಂಕ್ರಪ್ಪ ಅವರು ಯಾವ ದಾಟಿಯಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ಸದ್ಯಕ್ಕೆ ಮುಖ್ಯಮಂತ್ರಿ ಖುರ್ಚಿ ಖಾಲಿ ಎಲ್ಲ. ಹೀಗಾಗಿ ಲಿಂಗಾಯತ ಮುಖ್ಯಮಂತ್ರಿ ಚರ್ಚೆಯೇ ಅನಗತ್ಯ ಎಂದರು.
ಡಿಸಿಸಿ ಬ್ಯಾಂಕ್ ಮಾದರಿಯಲ್ಲಿ ಜಿಲ್ಲೆಗೊಂದು ಹಾಲು ಉತ್ಪಾದಕರ ಒಕ್ಕೂಟ ರಚನೆಯ ಚಿಂತನೆ ಈ ಹಿಂದೆ ಇತ್ತು. ಅದರಂತೆ ಧಾರವಾಡ ಒಕ್ಕೂಟದಿಂದ ಹಾವೇರಿಯಲ್ಲಿ ಪ್ರತ್ಯೇಕಿಸಿದ ಬಳಿಕ ಪ್ರತಿ ನಿತ್ಯ ತಲಾ ಒಂದು ಲಕ್ಷ ಲೀ. ಮಾತ್ರ ಹಾಲು ಉತ್ಪಾದಿಸುತ್ತಿವೆ. ಇದರಿಂದಾಗಿ ಒಕ್ಕೂಟಗಳ ನಿರ್ವಹಣೆ ಕಷ್ಟಕರವಾಗಲಿದೆ. ಈ ಹಿನ್ನೆಲೆಯಲ್ಲಿ ಅಂತಹ ಪ್ರಸ್ತಾಪ ಕೆಎಂಎಫ್ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಂಬರುವ ಲೋಕಸಭೆ ಚುನಾವಣೆಗೆ ಈಗಾಗಲೇ ಸ್ಥಳೀಯ ಮುಖಂಡರಿಂದ ಪಕ್ಷ ಅಭಿಪ್ರಾಯ ಸಂಗ್ರಹಿಸಿದೆ. ಅಭ್ಯರ್ಥಿ ನಿರ್ಧಾರ ಅಂತಿಮ ವಾಗಿ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು. ೨೦೨೩ರ ವಿಧಾನಸಭೆ ಚುನಾವಣೆ ಫಲತಾಂಶದ ಹಿನ್ನೆಲೆಯಲ್ಲಿ ಕ್ಷೇತ್ರದ ರೈತರ ಒತ್ತಾಯದ ಮೇರೆಗೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು.