ಜಿಲ್ಲೆ

ಶಕ್ತಿವಿಶಿಷ್ಟಾದ್ವೈತವು ಸನಾತನ ಸಮನ್ವಯ ದರ್ಶನ; ತಿರುಪತಿಯಲ್ಲಿ ಅಂತರಾಷ್ಟ್ರೀಯ ವಿಚಾರ ಸಂಕಿರಣ

ತಿರುಪತಿ : ವೀರಶೈವ ಧರ್ಮದ ಶಕ್ತಿವಿಶಿಷ್ಟಾದ್ವೈತ ಸಿದ್ದಾಂತವು ಸನಾತನ ಮತ್ತು ಸಮನ್ವಯ ಪರವಾದ ಭಾರತದ ಉತ್ಕೃಷ್ಟ ದರ್ಶನ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹಾಗೂ ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಪ್ರತಿಪಾದಿಸಿದ್ದಾರೆ. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಿವ, ಶಕ್ತಿ, ಜೀವ, ಜಗತ್ತು, ಬಂಧ, ಮೋಕ್ಷ ಮತ್ತು ಮೋಕ್ಷೋಪಾಯಗಳ ಕುರಿತಾಗಿ ಮಾಡುವ ಚಿಂತನೆಯನ್ನು ದರ್ಶನವೆಂದು ಕರೆಯಲಾಗುತ್ತದೆ. ಈ ಎಲ್ಲ ದಾರ್ಶನಿಕ ಸಂಗತಿಗಳ ಬಗ್ಗೆ ದಾರ್ಶನಿಕ ಲೋಕದಲ್ಲಿ ವಿಭಿನ್ನ ವಾದಗಳಿವೆ. ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತವು ಆ ಎಲ್ಲ ವಾದಗಳನ್ನು ಶೃತಿ ಸಮ್ಮತವಾಗಿ ಮತ್ತು ಯುಕ್ತಿಯುಕ್ತವಾಗಿ ಸಮನ್ವಯಗೊಳಿಸಿದ ಉತ್ಕೃಷ್ಟ ದರ್ಶನವಾಗಿದೆ. ಜಾತಿ, ವರ್ಣ, ವರ್ಗ ಮತ್ತು ಲಿಂಗ ಭೇದಗಳನ್ನು ನಿರಾಕರಿಸಿ ಧಾರ್ಮಿಕ ಆಚರಣೆಯಲ್ಲಿ ಸರ್ವರಿಗೂ ಸಮಾನ ಅವಕಾಶವನ್ನು ನೀಡುವ ಮೂಲಕ ಸರ್ವ ಸಮಾನತೆಯನ್ನು ಪ್ರತಿಪಾದನೆ ಮಾಡಿದೆ. ಜಗದ್ಗುರು ಪಂಚಾಚಾರ್ಯರು ಯುಗಯುಗಗಳಿಂದಲೂ ಉಪದೇಶ ಮಾಡುತ್ತ ಬಂದಿರುವ ಈ ಸಿದ್ಧಾಂತ ವೇದಾಗಮ ಸಮ್ಮತವಾದ ಸನಾತನ ದರ್ಶನವಾಗಿದೆ ಎಂದು ಉಭಯ ಜಗದ್ಗುರುಗಳು ವಿವರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಜಿ.ಎಸ್.ಆರ್.ಕೃಷ್ಣಮೂರ್ತಿಯವರು ಶಕ್ತಿವಿಶಿಷ್ಟಾದ್ವೈತ ಸಿದ್ದಾಂತವನ್ನು ಆಧರಿಸಿ ವಿಚಾರ ಸಂಕಿರಣ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ತಿರುಪತಿ ವಿವಿಯಲ್ಲಿ ಈ ಸಿದ್ಧಾಂತ ಅಧ್ಯಯನಕ್ಕೆ ಆದ್ಯತೆ ನೀಡಲಾಗುವುದು ಎಂದರು. ಸಮಾರಂಭದಲ್ಲಿ ಅಧ್ಯಯನ ವಿಭಾಗದ ಮುಖ್ಯಸ್ಥ ರಜನೀಕಾಂತ ಶುಕ್ಲ, ವೇದಾಂತ ವಿಭಾಗದ ಅಧ್ಯಕ್ಷ ಪ್ರೊ.ಕೆ.ಗಣಪತಿ ಭಟ್, ಕಡಗಂಚಿ, ಸಿಂದಗಿ, ವಿಭೂತಿಪುರ, ಹುಕ್ಕೇರಿ, ಕೆರೂರು, ಶಹಾಪುರ, ಕೊಣ್ಣೂರು, ನೀಲಗಲ್ಲ ಮಠದ ಶಿವಾಚಾರ್ಯರು, ವಿವಿಯ ಪ್ರಾದ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮೂರು ದಿನ ನಡೆಯುವ ವಿಚಾರ ಸಂಕಿರಣದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ ವಿದ್ವಾಂಸರು ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತದ ಕುರಿತು ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಇದೇ ವೇಳೆ ದೇಶದ ವಿವಿಧ ವಿದ್ವಾಂಸರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಅಧ್ಯಯನ ಕೇಂದ್ರ ಸ್ಥಾಪನೆಗೆ ಒತ್ತಾಯ

ಕರ್ನಾಟಕದ ಸಂಸ್ಕೃತ ವಿಶ್ವವಿದ್ಯಾಲಯ, ಕಾಶಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ ಮತ್ತಿತರ ವಿಶ್ವವಿದ್ಯಾಲಯಗಳಲ್ಲಿ ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತದ ಅಧ್ಯಯನ ವಿಭಾಗಗಳಿವೆ. ಸಾವಿರಾರು ವಿದ್ಯಾರ್ಥಿಗಳು, ವಿದ್ವಾಂಸರು, ಮಠಾಧೀಶರು ಅಧ್ಯಯನ ಮಾಡಿ ಶಾಸ್ತ್ರಿ, ಆಚಾರ್ಯ, ವಿದ್ಯಾವಾರಿಧಿ ಮುಂತಾದ ಪದವಿ ಮತ್ತು ಉಪಾಧಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಂತೆ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಕೂಡ ಶಕ್ತಿವಿಶಿಷ್ಟಾದ್ವೈತ ವೇದಾಂತ ವಿಭಾಗ ಪ್ರಾರಂಭಿಸಲು ವಿಚಾರ ಸಂಕಿರಣದಲ್ಲಿ ಒತ್ತಾಯಿಸಲಾಯಿತು.