ಜಿಲ್ಲೆ

ಜಿಲ್ಲೆಯಲ್ಲಿ ವೃದ್ಧಿಸಿದ 'ಶಕ್ತಿ'

ಸುನಿಲ್ ಪೊನ್ನೇಟಿ

ಮಡಿಕೇರಿ:

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಕೊಡಗಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯೋಜನೆ ಆರಂಭವಾಗಿ ಮಂಗಳವಾರಕ್ಕೆ (ಜು.೧೧) ಒಂದು ತಿಂಗಳು ಪೂರ್ಣವಾಗಿದ್ದು, ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಸುಮಾರು ನಾಲ್ಕು ಲಕ್ಷ ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಪಾಸ್ ಮೂಲಕ ಸಂಚರಿಸುತ್ತಿದ್ದ ವಿದ್ಯಾರ್ಥಿನಿಯರು, ಮಹಿಳಾ ಉದ್ಯೋಗಿಗಳಿಗೂ ಯೋಜನೆಯಿಂದ ಲಾಭವಾಗಿದೆ. ಈ ಮಧ್ಯೆ ಮೊದಲೇ ನಷ್ಟದಲ್ಲಿದ್ದ ಖಾಸಗಿ ಬಸ್ ಮಾಲೀಕರು ಮಾತ್ರ ಈಗ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳಲ್ಲಿ ಒಂದಾಗಿದ್ದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಉಳಿದ ಗ್ಯಾರಂಟಿಗಳಿಗಿಂತ ಮುಂಚಿತವಾಗಿ ಜಾರಿಯಾಗಿದ್ದು, ಒಂದು ತಿಂಗಳು ಪೂರೈಸಿದೆ. ಈ ಅವಧಿಯಲ್ಲಿ ರಾಜ್ಯಾದ್ಯಂತ ಒಟ್ಟು ೭೦,೧೫,೩೯೭ ಮಹಿಳೆಯರು ಶಕ್ತಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದರೆ ಕೊಡಗಿನಲ್ಲಿ ೪,೧೨,೪೪೦ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಮೂಲಕ ’ಶಕ್ತಿ’ ಫಲಾನುಭವಿಗಳಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ೧,೫೮,೦೭,೮೭೫ ರೂ. ಆದಾಯವನ್ನು ಮಹಿಳೆಯರು ಕೆಎಸ್‌ಆರ್‌ಟಿಸಿಗೆ ತಂದುಕೊಟ್ಟಿದ್ದಾರೆ.

’ಶಕ್ತಿ’ ಯೋಜನೆಗೆ ಚಾಲನೆ ಸಿಕ್ಕಿದ ಜೂ. ೧೧ರಂದು ಜಿಲ್ಲೆಯಲ್ಲಿ ೧,೦೮೬ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸಿದ್ದು, ೪೦,೦೪೮ ರೂ. ಆದಾಯವಷ್ಟೇ ಬಂದಿತ್ತು. ನಂತರದ ದಿನಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಜೂ. ೧೨ರಂದು ಏಕಾಏಕಿ ೮,೪೩೨ ಮಹಿಳೆಯರು ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಯೋಜನೆ ಆರಂಭ ಆದ ದಿನದಿಂದ ಇಲ್ಲಿಯ ತನಕ ಅತಿ ಹೆಚ್ಚು ಅಂದರೆ ಒಟ್ಟು ೧೭,೩೯೧ ಮಹಿಳೆಯರು ಜು.೪ರಂದು ಸಂಚರಿಸಿದ್ದಾರೆ. ಈ ಮೂಲಕ ಆ ಒಂದೇ ದಿನ ೬,೨೭,೦೬೯ ಆದಾಯ ಕೊಡಗು ಕೆಎಸ್‌ಆರ್‌ಟಿಸಿಗೆ ಮಹಿಳೆಯರಿಂದ ಬಂದಿದೆ. ಒಂದು ತಿಂಗಳಿನಲ್ಲಿ ದಿನಕ್ಕೆ ಸರಾಸರಿ ೧೩,೭೪೮ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.

ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗಕ್ಕೆ ಸೇರಿದ ಮಡಿಕೇರಿ ಘಟಕದಿಂದ ಪ್ರತಿದಿನ ಸುಮಾರು ೯೧ ಬಸ್‌ಗಳು ಓಡಾಡುತ್ತವೆ. ಅಂದಾಜು ೨೦ ಸಾವಿರಕ್ಕೂ ಅಧಿಕ ಪ್ರಯಾಣಿಕರು ಕೊಡಗಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚಾರ ಮಾಡುತ್ತಾರೆ. ಹೊರ ಜಿಲ್ಲೆಯ ಡಿಪೋಗಳು ಸೇರಿದಂತೆ ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ದಿನಕ್ಕೆ ೨೦೦ಕ್ಕೂ ಅಧಿಕ ಬಸ್‌ಗಳು, ಕುಶಾಲನಗರ ೨೫೦, ವಿರಾಜಪೇಟೆ ೧೪೦, ಸೋಮವಾರಪೇಟೆ ೭೦ ಹಾಗೂ ಹೆಬ್ಬಾಲೆಯಲ್ಲಿ ಸುಮಾರು ೭೦ ಬಸ್‌ಗಳು ಸಂಚರಿಸುತ್ತವೆ. ವರ್ಷಕ್ಕೆ ಸುಮಾರು ೪೦ ಕೋಟಿ ರೂ. ಆದಾಯ ಕೊಡಗಿನಿಂದ ಸಾರಿಗೆ ಇಲಾಖೆಗೆ ಬರುತ್ತದೆ. ರಾಜ್ಯ ಸರ್ಕಾರದ ’ಶಕ್ತಿ’ ಯೋಜನೆಗೆ ಸಮಾರು ೧೦ ಸಾವಿರಕ್ಕೂ ಅಧಿಕ ಮಂದಿ ಫಲಾನುಭವಿಗಳು ಇರಬಹುದು ಎಂದು ಮೊದಲು ಅಂದಾಜು ಮಾಡಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಮಹಿಳಾ ಪ್ರಯಾಣಿಕರು ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ.

ಮೈಸೂರು ಮತ್ತು ಮಡಿಕೇರಿ, ಕುಶಾಲನಗರ ಮತ್ತು ಮಡಿಕೇರಿ, ಭಾಗಮಂಡಲ ಮತ್ತು ಮಡಿಕೇರಿ ಮಧ್ಯೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ನೌಕರರು ದಿನನಿತ್ಯ ಓಡಾಡುತ್ತಾರೆ. ಹೀಗೆ ಪ್ರತಿದಿನ ಸಂಚರಿಸುವ ಮಹಿಳೆಯರಿಗೆ ’ಶಕ್ತಿ’ನ ಯೋಜನೆ ಮತ್ತಷ್ಟು ಶಕ್ತಿ ನೀಡಿದೆ. ಪೇಯಿಂಗ್ ಗೆಸ್ಟ್, ಹಾಸ್ಟೆಲ್‌ಗಳಲ್ಲಿ ಇದ್ದವರೂ ಈಗ ಸ್ವ ಸ್ಥಳದಿಂದಲೇ ಹತ್ತಿರದ ಕರ್ತವ್ಯದ ಸ್ಥಳ ಹಾಗೂ ಶಾಲಾ, ಕಾಲೇಜುಗಳಿಗೆ ತೆರಳಲು ಆರಂಭಿಸಿದ್ದಾರೆ. ನಗರ ಸಾರಿಗೆ, ಸಾಮಾನ್ಯ, ವೇಗದೂತ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಸದ್ಯಕ್ಕೆ ಆಧಾರ್ ಕಾರ್ಡ್ ಸೇರಿದಂತೆ ಗುರುತಿನ ಚೀಟಿ ತೋರಿಸಿ ಪ್ರಯಾಣಿಸುತ್ತಿದ್ದು, ಮುಂದೆ ಇದಕ್ಕಾಗಿ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಬೇಕಾಗುತ್ತದೆ.

ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಖಾಸಗಿ ಬಸ್‌ಗಳೇ ಜನಸಾಮಾನ್ಯರ ಜೀವನಾಡಿ. ಪ್ರಯಾಣಿಸುವುದಕ್ಕೆ ಮಾತ್ರವಲ್ಲದೆ ದಿನ ನಿತ್ಯದ ಪತ್ರಿಕೆ, ಹಾಲು ತರಿಸಲು, ಬಂಧುಗಳಿಗೆ. ಸ್ನೇಹಿತರಿಗೆ ಪಾರ್ಸೆಲ್ ಕಳಿಸಲು, ಔಷಧಿ ತರಿಸಿಕೊಳ್ಳಲು ಹೀಗೆ ಖಾಸಗಿ ಬಸ್‌ಗಳು ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿದೆ. ಈ ಬಸ್‌ಗಳ ಚಾಲಕರು, ನಿರ್ವಾಹಕರು, ಕ್ಲೀನರ್‌ಗಳೂ ತಮ್ಮವರೇ ಎನ್ನುವಂತೆ ಆತ್ಮೀಯರೂ ಆಗಿರುತ್ತಾರೆ. ಆದರೆ ಕೊರೊನಾ ನಂತರ ಜಿಲ್ಲೆಯಲ್ಲಿ ಖಾಸಗಿ ಬಸ್ ವ್ಯವಸ್ಥೆ ಸಂಕಷ್ಟದಲ್ಲಿದೆ. ಮಾಲೀಕರಿಗೆ ತಮ್ಮ ಬಸ್ ಮತ್ತು ಸಿಬ್ಬಂದಿ ನಿರ್ವಹಣೆ ಕಷ್ಟವಾಗುತ್ತಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಇಲ್ಲದಿರುವ ಕಡೆ ಖಾಸಗಿ ಬಸ್‌ಗಳು ಸ್ವಲ್ಪ ಮಟ್ಟಿಗೆ ಉಸಿರಾಡುತ್ತಿವೆ. ಆದರೆ ಉಳಿದೆಡೆ ಶಕ್ತಿ ಯೋಜನೆ ಜಾರಿಗೆ ಬಂದ ನಂತರವಂತೂ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಸುಮಾರು ೧೮೦ಕ್ಕೂ ಅಧಿಕ ಖಾಸಗಿ ಬಸ್‌ಗಳು ಪ್ರಮುಖ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸೇವೆ ನೀಡುತ್ತಿದೆ.

ಶಕ್ತಿ ಯೋಜನೆಗೆ ಕೊಡಗಿನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಹಿಳೆಯರು ಸರ್ಕಾರದ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ರಯಾಣಿಕರ ಅವಶ್ಯಕತೆಗಳಿಗೆ ಸಂಸ್ಥೆ ಪೂರಕವಾಗಿ ಸ್ಪಂದಿಸಲಿದೆ.
ಗೀತಾ, ವ್ಯವಸ್ಥಾಪಕಿ, ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋ

ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಖಾಸಗಿ ಬಸ್‌ಗಳಿಗೆ ದೊಡ್ಡ ಹೊಡೆತ ಸಿಕ್ಕಂತಾಗಿದೆ. ಕೊರೊನಾ ಸಂದರ್ಭದಲ್ಲಿ ಸಿಕ್ಕಿದ ಏಟಿನಿಂದ ಇನ್ನೂ ಚೇತರಿಕೆ ಕಂಡಿಲ್ಲ. ಈಗ ಶಕ್ತಿ ಯೋಜನೆಯಿಂದ ಖಾಸಗಿ ಬಸ್‌ಗಳು ಖಾಲಿ ಓಡಾಡಬೇಕಿದೆ. ಬಸ್‌ಗಳ ನಿರ್ವಹಣೆಯೇ ಈಗ ಕಷ್ಟವಾಗಿದೆ.
ಜೆ.ಬಿ. ರವಿಶಂಕರ್, ಖಾಸಗಿ ಸಾರಿಗೆ ಸಂಸ್ಥೆ ವ್ಯವಸ್ಥಾಪಕ