ಜಿಲ್ಲೆ

ಶಕ್ತಿ ಯೋಜನೆ ಜಾಲಿ ಜಾಲಿ; ರಾಜಧಾನಿ ದೇವಾಲಯಗಳು ಖಾಲಿ ಖಾಲಿ

ಪ್ರಶಾಂತ ರಿಪ್ಪನ್​ಪೇಟೆ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪಂಚ ಗ್ಯಾರಂಟಿಗಳಲ್ಲಿ ಮಹಿಳೆಯರನ್ನು ಸೆಳೆದ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಪ್ರಮುಖವಾದದ್ದು. ಶಕ್ತಿ ಯೋಜನೆಯಿಂದ ನಾಡಿನ ದೇವಸ್ಥಾನಗಳು ಮಹಿಳೆಯರಿಂದ ತುಂಬಿ ತುಳುಕುತ್ತಿರುವುದು ವಾಸ್ತವ. ಅದರಿಂದ ದೇವಾಲಯಗಳ ಆದಾಯ ಕೂಡಾ ವೃದ್ಧಿಯಾಗಿದೆ. ಆದರೆ ಬೆಂಗಳೂರು ನಗರದ ದೇವಾಲಯಗಳ ಆದಾಯದಲ್ಲಿ ಕುಸಿತ ಕಂಡಿರುವುದು ಆಶ್ಚರ್ಯವೆನಿಸಿದರೂ ಸತ್ಯ. ಮುಜರಾಯಿ ಇಲಾಖೆಯಲ್ಲಿ ವಾರ್ಷಿಕ 25ಲಕ್ಷಕ್ಕಿಂತ ಮೇಲ್ಪಟ್ಟ ಆದಾಯವಿರುವ ದೇವಾಲಯಳನ್ನು ಎ ಗ್ರೇಡ್ ದೇವಾಲಯವೆಂದು, 5 ಲಕ್ಷದಿಂದ 25 ಲಕ್ಷ ಆದಾಯವಿರುವ ದೇವಾಲಯಗಳನ್ನು ಬಿ ಗ್ರೇಡ್ ದೇವಾಲಯಗಳೆಂದು ಹಾಗೂ 5 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ದೇವಾಲಯಗಳನ್ನು ಸಿ ಗ್ರೇಡ್ ದೇವಾಲಯಗಳೆಂದು ಪರಿಗಣಿಸಲಾಗುತ್ತದೆ. ಈ ಪ್ರಕಾರ ಮುಜರಾಯಿ ಇಲಾಖೆಯ ವಾರ್ಷಿಕ ಲೆಕ್ಕಪರಿಶೋಧನೆಯ ಪ್ರಕಾರ ರಾಜ್ಯದ ಒಟ್ಟಾರೆ ಆದಾಯದಲ್ಲಿ ಕೊಂಚ ಏರಿಕೆ ಕಂಡಿದ್ದರೂ, ರಾಜಧಾನ ಬೆಂಗಳೂರಿನ ದೇವಾಲಯಗಳ ವಾರ್ಷಿಕ ಆದಾಯವು 2023ನೇ ಸಾಲಿಗಿಂತ 2024ನೇ ಸಾಲಿನಲ್ಲಿ ಕುಸಿತ ಕಂಡಿರುವುದು ಇಲಾಖೆಯ ಅಧಿಕಾರಿಗಳಿಗೂ ತಲೆನೋವಾಗಿದೆ. ರಾಜ್ಯದ ಒಟ್ಟು 205 ಎ ಗ್ರೇಡ್ ದೇವಾಲಯಗಳ ಪೈಕಿ 2023ರಲ್ಲಿ ಇದ್ದ 675 ಕೋಟಿ ರೂ. 2024ರಲ್ಲಿ 743 ಕೋಟಿಗೆ ಹೆಚ್ಚಳವಾಗಿದ್ದು, ಬಿ ಗ್ರೇಡ್ ದೇವಾಲಯಗಳ ಆದಾಯ 33.3 ಕೋಟಿ ರೂ.ನಿಂದ 34.8 ಕೋಟಿ ರೂ.ಗೆ ಹೆಚ್ಚಳವಾಗಿದೆ. ಆದರೆ ಬೆಂಗಳೂರಿನ ಪ್ರಮುಖ 16 ದೇವಾಲಯಗಳ ಆದಾಯದಲ್ಲಿ ಕುಸಿತ ಕಂಡಿರುವುದು ಇತರೆ ದೇವಾಲಯಗಳ ಆದಾಯಕ್ಕೆ ವ್ಯತಿರಿಕ್ತವಾಗಿದೆ. ಕೆ.ಆರ್.ಮಾರ್ಕೆಟ್ ಸಮೀಪ ಇರುವ ಕೋಟೆ ಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಾಲಯ, ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನ, ಬಾಣಸವಾಡಿಯ ಆಂಜನೇಯ ಸ್ವಾಮಿ ದೇವಸ್ಥಾನ, ಮಲ್ಲೇಶ್ವರದ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ, ವಸಂತಪುರದ ವಸಂತ ವಲ್ಲಭರಾಯ ಸ್ವಾಮಿ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳು ಆದಾಯದಲ್ಲಿ ಕುಸಿತ ಕಂಡಿವೆ.

ಶಕ್ತಿಯಿಂದ ಕುಸಿದ ದೇಗುಲಗಳ ಆರ್ಥಿಕ ಶಕ್ತಿ

ಸ್ವತಃ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿಯವರು ಪ್ರತಿಕ್ರಿಯಿಸಿರುವ ಪ್ರಕಾರ, ಆರ್ಥಿಕ ಸಂಕಷ್ಟದಿಂದ ನಾಡಿನ ಪ್ರಮುಖ ಕ್ಷೇತ್ರಗಳನ್ನು ಈವರೆಗೆ ಸಂದರ್ಶಿಸದೇ ಇರುವ ಮಹಿಳೆಯರು ಶಕ್ತಿ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಉಚಿತ ಬಸ್ ಮೂಲಕ ನಾಡಿನ ವಿವಿಧ ಕ್ಷೇತ್ರಗಳ ದರ್ಶನಕ್ಕೆ ಧಾವಿಸುತ್ತಿರುವುದರಿಂದ ನಗರದಲ್ಲಿರುವ ದೇವಾಲಯಗಳಿಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಿದೆ. ಭಕ್ತರು ಕಡಿಮೆಯಾಗಿರುವುದರಿಂದ ದೇವಾಲಯದ ಹುಂಡಿ ಮೂಲಕ, ವಿವಿಧ ಸೇವೆಯ ಮೂಲಕ ಸಂಗ್ರಹವಾಗುವ ಹಣ ಕಡಿಮೆಯಾಗಿದೆ. ಒಂದು ಕಡೆಯಲ್ಲಿ ದೇವಾಲಯಗಳ ಆದಾಯ ಹೆಚ್ಚಲು ಕಾರಣವಾಗಿರುವ ಶಕ್ತಿ ಯೋಜನೆಯೇ ಬೆಂಗಳೂರಿನ ದೇವಾಲಯಗಳ ಆದಾಯ ಕುಸಿತಕ್ಕೂ ಕಾರಣ ಎನ್ನಲಾಗುತ್ತಿದೆ.

ಆದಾಯ ಕುಸಿತಕ್ಕೆ ಹಲವು ಕಾರಣ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆಲೆ ಏರಿಕೆ ಕೂಡಾ ದೇವಾಲಯಗಳ ಆದಾಯ ಕುಸಿತಕ್ಕೆ ಕಾರಣ ಎನ್ನಬಹುದು. ಮೆಟ್ರೋ ಪ್ರಯಾಣ ದರ, ವಿದ್ಯುತ್ ದರ, ಹಾಲಿನ ದರ ಹೀಗೆ ದಿನಬಳಕೆ ವಸ್ತುಗಳ ಬೆಲೆ ಸಾಲು ಸಾಲಾಗಿ ಹೆಚ್ಚುತ್ತಿರುವುದರಿಂದ ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತಿದೆ. ಇದರಿಂದಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಹುಂಡಿಗೆ ಹಾಕುವ ಕಾಣಿಕೆಯನ್ನು ಕಡಿತಗೊಳಿಸಿರುವ ಸಾಧ್ಯತೆ ಇದೆ. ಇನ್ನೊಂದೆಡೆ ಸ್ವತಃ ಮುಜರಾಯಿ ಇಲಾಖೆ ಆಯೋಜಿಸುವ ‘ಭಾರತ್ ಗೌರವ ಯಾತ್ರೆ’ ಯೋಜನೆಯಲ್ಲಿ ಕಾಶೀ, ಅಯೋಧ್ಯೆ, ಪ್ರಯಾಗ, ಪುರಿ ಜಗನ್ನಾಥ, ರಾಮೇಶ್ವರ, ಮಧುರೈ, ಕನ್ಯಾಕುಮಾರಿ ಇನ್ನಿತರೆ ಹೊರರಾಜ್ಯಗಳ ಪ್ರವಾಸಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಕೂಡ ಬೆಂಗಳೂರಿನ ದೇವಾಲಯಗಳ ಆದಾಯ ಕುಸಿತಕ್ಕೆ ಒಂದು ಕಾರಣವಾಗಿದೆ.

ಆದಾಯದಲ್ಲಿ ಕುಸಿತ ಕಂಡಿರುವ ದೇವಾಲಯಗಳು :

ಮಿಂಟೋ ಆಂಜನೇಯಸ್ವಾಮಿ ದೇವಸ್ಥಾನ 193 ಲಕ್ಷದಿಂದ   114.8 ಲಕ್ಷಗವಿಗಂಗಾಧರೇಶ್ವರ ದೇವಸ್ಥಾನ 92 ಲಕ್ಷದಿಂದ 84.9 ಲಕ್ಷಬಾಣಸವಾಡಿ ಆಂಜನೇಯಸ್ವಾಮಿ ದೇವಸ್ಥಾನ 89 ಲಕ್ಷದಿಂದ 69.7 ಲಕ್ಷಹನುಮಂತನಗರ ಕುಮಾರಸ್ವಾಮಿ ದೇವಸ್ಥಾನ 70.3 ಲಕ್ಷದಿಂದ 62.4 ಲಕ್ಷವಸಂತವಲ್ಲಭಸ್ವಾಮ ದೇವಸ್ಥಾನ 67.9 ಲಕ್ಷದಿಂದ 65.6 ಲಕ್ಷಮಲ್ಲೇಶ್ವರ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ 59 ಲಕ್ಷದಿಂದ 48.3 ಲಕ್ಷಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನ 54.1 ಲಕ್ಷದಿಂದ 36.7 ಲಕ್ಷಚಾಮರಾಜಪೇಟೆ ರಾಮೇಶ್ವರ ದೇವಸ್ಥಾನ 48.6 ಲಕ್ಷದಿಂದ 38.5 ಲಕ್ಷಮಲ್ಲೇಶ್ವರ ಮಹಾಗಣಪತಿ ದೇವಸ್ಥಾನ 47.8 ಲಕ್ಷದಿಂದ 30.9 ಲಕ್ಷ

ಮಹಿಳೆಯರಿಗೆ ಆರ್ಥಿಕ ಶಕ್ತಿ ಕಲ್ಪಿಸುವುದಕ್ಕಾಗಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಎರಡು ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆಯಿಂದ ಮಹಿಳೆಯರು ನಾಡಿನ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುವುದು ಹೆಚ್ಚಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಕಟೀಲು, ಸವದತ್ತಿ ಹೀಗೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುವತ್ತ ಗಮನ ನೀಡಿರುವುದರಿಂದ ಸ್ಥಳೀಯ ದೇವಾಲಯಗಳಿಗೆ ಹೋಗುವುದು ಕಡಿಮೆಯಾಗಿರಬಹುದು. -ರಾಮಲಿಂಗಾ ರೆಡ್ಡಿ, ಮುಜರಾಯಿ ಸಚಿವರುಶಕ್ತಿ ಯೋಜನೆ ಕೇವಲ ಮಹಿಳೆಯರಿಗೆ ಅನ್ವಯಿಸುತ್ತದೆ. ಅದರಿಂದ ದೇವಸ್ಥಾನಕ್ಕೆ ಬರುವವರ ಸಂಖ್ಯೆ ಕಡಿಮೆ ಎನ್ನುವುದಕ್ಕಿಂತ ಹೆಚ್ಚಾಗಿ ಯುವ ಜನರಲ್ಲಿ ದೇವರು, ಧರ್ಮದ ಬಗ್ಗೆ ಶ್ರದ್ಧೆ ಕಾಣುತ್ತಿಲ್ಲ. ಕೇವಲ ಮೋಜು-ಮಸ್ತಿಗೆ ಗಮನ ನೀಡುತ್ತಿದ್ದಾರೆ. ಐಷರಾಮಿ ಕಾರು, ಬೈಕು ಖರೀದಿಸಿದಾಗ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗುವ ಪುರುಷರು ಮತ್ತೆ ಇತ್ತ ಸುಳಿಯುವುದಿಲ್ಲ. ಇದು ದೇವಾಲಯಗಳ ಆದಾಯ ಕುಸಿಯುವುದಕ್ಕೆ ಕಾರಣ -ಶ್ರೀಚನ್ನವೀರ ದೇವರು, ಸಿದ್ಧಿವಿನಾಯಕ ದೇವಸ್ಥಾನದ ಅರ್ಚಕರು, ಜಯನಗರ