ಜಿಲ್ಲೆ

ನಾಲ್ಕು ಸಾರಿಗೆ ನಿಗಮಕ್ಕೆ 'ಶಕ್ತಿ' ವರಮಾನ

ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ: ರಾಜ್ಯಾದ್ಯಂತ ಅಭೂತಪೂರ್ವ ಸ್ಪಂದನೆ ದೊರೆಯುತ್ತಿರುವ 'ಶಕ್ತಿ' ಯೋಜನೆ ಬರೋಬ್ಬರಿ ಎರಡು ತಿಂಗಳು ಪೂರೈಸಿದ್ದು, ನಾಲ್ಕು ಸಾರಿಗೆ ನಿಗಮಗಳ ವಾಹನಗಳಿಂದಲೂ ಮಹಿಳಾ ಪ್ರಯಾಣಿಕರ ಸಂಚಾರದಿಂದಾಗಿ ಸಂಸ್ಥೆಗೆ 839.81 ಕೋಟಿ ರೂ. ವರಮಾನ ಸಂಗ್ರಹವಾಗಿದೆ.

ರಾಜ್ಯದ ಸಾರಿಗೆ ಸಂಸ್ಥೆಯ ಬಸ್‌ಗಳು ನಿತ್ಯ ಸಂಚರಿಸುವ ಬಹುತೇಕ ಜನರ ಜೀವನಾಡಿಯಾಗಿದ್ದು, 'ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ 'ಶಕ್ತಿ' ಯೋಜನೆ ಬಳಿಕ ಸ್ತ್ರೀ ಪಯಣದ ಅಚ್ಚುಮೆಚ್ಚಿನ ಸಾರಥಿಯಾಗಿ ಹೊರಹೊಮ್ಮಿವೆ.

ಕಿರಿಯರಿಂದ ಹಿರಿಯರವರೆಗೂ ವೇಗದೂತ, ಸಾಮಾನ್ಯ, ನಗರ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಲಾಭ ಪಡೆದು ಸಂಚರಿಸಿದ ಹಲವರು ಸಂಭ್ರಮಿಸುತ್ತಲೇ ಇದ್ದಾರೆ. ಅಲ್ಲದೆ, ಬಡವರ ಆದಾಯ ಉಳಿತಕ್ಕೂ ಕಾರಣವಾಗಿದೆ. ಮಹಿಳೆಯರ ಮಿಂಚಿನ ಸಂಚಾರದಿಂದ ಸಂಸ್ಥೆಯ ಆದಾಯದಲ್ಲೂ ಏರಿಕೆ ಕಾಣಲಾರಂಭಿಸಿದೆ.

'ಶಕ್ತಿ ಯೋಜನೆ ಜಾರಿಗೂ ಮುನ್ನ ನಾಲ್ಕು ನಿಗಮಗಳಿಂದ ನಿತ್ಯದ ಆದಾಯ 24.48 ಕೋಟಿ ರೂ. ಇತ್ತು. ಯೋಜನೆ ನಂತರ ಮೊದಲ ತಿಂಗಳ ಸರಾಸರಿಯಲ್ಲಿ 28.89 ಕೋಟಿ ರೂ. ಆಗಿದ್ದು, ನಿತ್ಯ ಆದಾಯದಲ್ಲಿ 4.41 ಕೋಟಿ ರೂ. ಹೆಚ್ಚಳವಾಗಿತ್ತು. ಎರಡನೇ ತಿಂಗಳ ಅವಧಿಯಲ್ಲಿ 5 ಕೋಟಿ ರೂ. ದಾಟಿದೆ.

ರಾಜ್ಯದಲ್ಲಿ ಪ್ರತಿ ದಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ 16ರಿಂದ 19 ಲಕ್ಷ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ 17 ರಿಂದ 20 ಲಕ್ಷ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ 13ರಿಂದ 15 ಲಕ್ಷ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ 7ರಿಂದ 9 ಲಕ್ಷ ಸೇರಿ 60ರಿಂದ 65 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಈ ಪೈಕಿ ಆ.9ರಂದು 1.15 ಕೋಟಿ ಪ್ರಯಾಣಿಕರು ಸಂಚರಿಸಿದ್ದು, ಇದರಲ್ಲಿ 67 ಲಕ್ಷ ಮಹಿಳಾ ಪ್ರಯಾಣಿಕರೇ ಸಂಚರಿಸಿದ್ದಾರೆ. ಯೋಜನೆ ಬಳಿಕ ಕೆಲ ದಿನಗಳಲ್ಲಿ 70 ಲಕ್ಷ ಮೀರಿದ್ದು, ದಾಖಲೆ ನಿರ್ಮಿಸಿದ್ದಾರೆ.

ಯೋಜನೆ ಜಾರಿ ಮುನ್ನ ನಿತ್ಯದ ಸರಾಸರಿ ಗಮನಿಸಿದರೆ, ನಾಲ್ಕು ನಿಗಮಗಳಿಂದಲೂ 84.91 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಆದರೀಗ 1.1 ಕೋಟಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಪ್ರತಿದಿನ ಕರಾರಸಾನಿ-423, ಬೆಂಮಸಾಸ-238, ವಾಕರಸಾಸಂ-986, ಕಕರಸಾಸಂ-1,500 ಸೇರಿ 3,147 ಹೆಚ್ಚುವರಿ ಟ್ರಿಪ್‌ಗಳ ಮೂಲಕ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ತಿಂಗಳ ಸರಾಸರಿಯಲ್ಲಿ 1.58 ಲಕ್ಷಕ್ಕೂ ಅಧಿಕ ಟ್ರಿಪ್ ಸಂಚರಿಸಿವೆ ಎಂಬುದು ಸಾರಿಗೆ ಸಚಿವರ ಕಾರ್ಯಾಲಯ, ಸಂಸ್ಥೆಯ ಮಾಹಿತಿ.

500 ಕೋಟಿ ರೂ. ಅನುದಾನದ ಭರವಸೆ: ಯೋಜನೆ ಜಾರಿ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದ್ದು, 3 ಸಾವಿರಕ್ಕೂ ಅಧಿಕ ಹೊಸ ಬಸ್‌ಗಳ ಅಗತ್ಯವಿದೆ ಎಂದು ಸಂಸ್ಥೆ ಮತ್ತು ನಿಗಮದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಸರ್ಕಾರ ಮೊದಲ ಹಂತವಾಗಿ 1 ಸಾವಿರಕ್ಕೂ ಹೆಚ್ಚು ಬಸ್ ಖರೀದಿಸಲು 500 ಕೋಟಿ ರೂ. ಅನುದಾನದ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಬಜೆಟ್‌ನಲ್ಲೂ ಅಗತ್ಯ ಅನುದಾನ ನೀಡುವುದಾಗಿ ಸಿಎಂ ಘೋಷಿಸಿದ್ದರು.