ಜಿಲ್ಲೆ

ಶಕ್ತಿ ಯೋಜನೆಗೆ ಭರ್ಜರಿ ಸ್ಪಂದನೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸೀಮಿತ ಸೇವೆಯ ಆರೋಪದ ಮಧ್ಯೆಯೂ ಸರ್ಕಾರದ ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಪುತ್ತೂರು ವಿಭಾಗಕ್ಕೆ ಒಳಪಡುವ ಮಡಿಕೇರಿ ಡಿಪೋದಲ್ಲಿ ದಿನಕ್ಕೆ ಸರಾಸರಿ 15 ಸಾವಿರ ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಯೋಜನೆ ಶುರುವಾದಲ್ಲಿಂದ ಇಲ್ಲಿಯ ತನಕ ಸುಮಾರು 1.10 ಕೋಟಿ ಫಲಾನುಭವಿಗಳು ಉಚಿತ ಪ್ರಯಾಣದ ಲಾಭ ಪಡೆದುಕೊಂಡಿದ್ದಾರೆ.

ಚುನಾವಣೆಗೂ ಮೊದಲು ಕೊಟ್ಟಿದ್ದ ಭರವಸೆಯಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮೊದಲು ಜಾರಿ ಮಾಡಿದ ಗ್ಯಾರಂಟಿ ಯೋಜನೆ 'ಶಕ್ತಿ' ಆರಂಭವಾಗಿ 2 ವರ್ಷ ಪೂರೈಸಿದೆ. 2023ರ ಜೂ. 11ಕ್ಕೆ ಶುರುವಾದ ಶಕ್ತಿ ಯೋಜನೆಗೆ ಎಲ್ಲಾ ಕಡೆಗಳಲ್ಲಿ ಇದ್ದಂತೆ ಕೊಡಗಿನಲ್ಲೂ ಮೊದಲಿನಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜಿಲ್ಲೆಯಲ್ಲಿ ಮಡಿಕೇರಿಯಲ್ಲಿ ಮಾತ್ರ ಕೆಎಸ್‌ಆರ್‌ಟಿಸಿ ಡಿಪೋ ಇದ್ದು, ಮಡಿಕೇರಿ ಡಿಪೋಕ್ಕೆ ಸಂಬAಧಿಸಿದAತೆ ಕಳೆದ 2 ವರ್ಷಗಳಲ್ಲಿ ಒಟ್ಟು 1,10,56,779 ಮಹಿಳೆಯರು ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.

ಕೆಎಸ್‌ಆರ್‌ಟಿಸಿ ಮಾಹಿತಿಯಂತೆ 'ಶಕ್ತಿ' ಯೋಜನೆ ಅಡಿಯಲ್ಲಿ ಉದ್ಯೋಗಿಗಳು ಸೇರಿದಂತೆ 1,08,09,369 ವಯಸ್ಕ ಮಹಿಳೆಯರು ಪ್ರಯಾಣ ಮಾಡಿದ್ದರೆ, 2,47,410 ಮಕ್ಕಳು, ಶಾಲಾ-ಕಾಲೇಜು ವಿದ್ಯಾರ್ಥಿನಿಯರು 'ಶಕ್ತಿ' ಯೋಜನೆಯನ್ನು ಬಳಸಿಕೊಂಡಿದ್ದಾರೆ. ಈ ಯೋಜನೆ ಮೂಲಕ 45,97,27,147 ರೂ. ಆದಾಯ ಮಡಿಕೇರಿ ಕೆಎಸ್‌ಆರ್‌ಟಿಸಿ ಡಿಪೋಕ್ಕೆ ಬಂದಿದ್ದು, ಪ್ರತಿ ದಿನ ಸರಾಸರಿ 6,51,172 ರೂ. ಆದಾಯ 'ಶಕ್ತಿ' ಯೋಜನೆ ಮೂಲಕವೇ ಸಂಸ್ಥೆಗೆ ಸಂದಾಯ ಆಗುತ್ತಿದೆ. ಈ ಯೋಜನೆ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಮಹಿಳಾ ಪ್ರಯಾಣಿಕರಿಂದ ಶೇ. 70.94ರಷ್ಟು ಆದಾಯ ಹೆಚ್ಚಾಗಿದೆ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.

2023ರ ಜೂ. 11ಕ್ಕೆ 'ಶಕ್ತಿ' ಯೋಜನೆ ಶುರುವಾದಾಗ ದಿನಕ್ಕೆ ಸರಾಸರಿ 8,914 ಮಹಿಳಾ ಪ್ರಯಾಣಿಕರು ಯೋಜನೆಯ ಲಾಭ ಪಡೆದುಕೊಂಡು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದರು. ಆ ಸಂದರ್ಭದಲ್ಲಿ ಈ ಮೂಲಕ ದಿನದ ಸರಾಸರಿ ಆದಾಯ 3,34,038 ರೂ. ಬರುತ್ತಿತ್ತು. ಈ ಜೂನ್ ತಿಂಗಳ ಮಾಹಿತಿ ಪ್ರಕಾರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರತಿದಿನ ಸಂಚರಿಸುವ ಮಹಿಳೆಯರ ಸರಾಸರಿ ಸಂಖ್ಯೆ 16,248 ಆಗಿದ್ದು, ದಿನಕ್ಕೆ ಸರಾಸರಿ 7,71,626 ರೂ. ಆದಾಯ ಬಂದಿದೆ.

ಯೋಜನೆ ಆರಂಭ ಆದ ನಂತರ 2 ಬಾರಿ ಮಾತ್ರ ಸರಾಸರಿ ಪ್ರಯಾಣಿಕರ ಸಂಖ್ಯೆ ಇಳಿಕೆ ಆಗಿರುವುದು ಕಂಡು ಬಂದಿದೆ. 2023ರ ಜುಲೈನಲ್ಲಿ ದಿನಕ್ಕೆ ಸರಸರಿ 14,365 ಪ್ರಯಾಣಿಕರು ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣ ಮಾಡಿದ್ದರೆ, 2024ರ ಜುಲೈನಲ್ಲಿ ದಿನಕ್ಕೆ ಸರಾಸರಿ 14,228 ಪ್ರಯಾಣಿಕರು ಪ್ರಯಾಣ ಮಾಡುವ ಮೂಲಕ ಶೇ. 0.95ರಷ್ಟು ಅಲ್ಪ ಪ್ರಮಾಣದಲ್ಲಿ ಇಳಿಕೆ ಆಗಿತ್ತು. 2023ರ ಡಿಸೆಂಬರ್‌ನಲ್ಲಿ ದಿನಕ್ಕೆ ಸರಾಸರಿ 15,852 ಮಹಿಳೆಯರು ಪ್ರಯಾಣಿಸಿದ್ದರೆ, 2024ರ ಡಿಸೆಂಬರ್‌ನಲ್ಲಿ 15,686 ಮಹಿಳೆಯರು ಪ್ರಯಾಣಿಸುವ ಮೂಲಕ ಶೇ. 2.41ರಷ್ಟು ಇಳಿಕೆ ಆಗಿತ್ತು. ಈ ಎರಡು ಅವಧಿಯಲ್ಲಿ ಸರಾಸರಿ ಆದಾಯದಲ್ಲೂ ಶೇ. 0.44 ಮತ್ತು ಶೇ 1.88 ರಷ್ಟು ಕಡಿಮೆ ಇತ್ತು.

ಯೋಜನೆ ಆರಂಭ ಆದ ನಂತರ ಈ ವರ್ಷದ ಏಪ್ರಿಲ್‌ನಲ್ಲಿ ಅತ್ಯಂತ ಹೆಚ್ಚು ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಈ ತಿಂಗಳಿನಲ್ಲಿ ಒಟ್ಟು 5,33,309 ಪ್ರಯಾಣಿಕರು ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣ ಮಾಡಿದ್ದು, ಸಂಸ್ಥೆಗೆ ಒಟ್ಟು 3,42,48,724 ರೂ. ಆದಾಯ ತಂದು ಕೊಟ್ಟಿದ್ದಾರೆ. 2025ರ ಏಪ್ರಿಲ್‌ನಲ್ಲಿ ದಿನಕ್ಕೆ ಸರಾಸರಿ 17,768 ಮಹಿಳೆಯರು ಸಂಚರಿಸಿದ್ದು, ದಿನಕ್ಕೆ ಸರಾಸರಿ 11,41,624 ರೂ. ಆದಾಯ ಬಂದಿದೆ. 20204ರ ನವೆಂಬರ್‌ನಲ್ಲಿ ದಿನಕ್ಕೆ ಸರಾಸರಿ 17,724 ಪ್ರಯಾಣಿಕರು ಮತ್ತು 2014ರ ಅಕ್ಟೋಬರ್‌ನಲ್ಲಿ ದಿನಕ್ಕೆ ಸರಾಸರಿ 17,342 ಪ್ರಯಾಣಿಕರು 'ಶಕ್ತಿ' ಯೋಜನೆ ಅಡಿಯಲ್ಲಿ ಪ್ರಯಾಣ ಮಾಡಿದ್ದಾರೆ.

ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗಕ್ಕೆ ಸೇರಿದ ಮಡಿಕೇರಿ ಘಟಕದಿಂದ ಪ್ರತಿದಿನ ಸುಮಾರು 95 ಬಸ್‌ಗಳು ಓಡಾಡುತ್ತವೆ. ಅಂದಾಜು 20 ಸಾವಿರಕ್ಕೂ ಅಧಿಕ ಪ್ರಯಾಣಿಕರು ಕೊಡಗಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚಾರ ಮಾಡುತ್ತಾರೆ. ಹೊರ ಜಿಲ್ಲೆಯ ಡಿಪೋಗಳು ಸೇರಿದಂತೆ ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ದಿನಕ್ಕೆ 200ಕ್ಕೂ ಅಧಿಕ ಬಸ್‌ಗಳು, ಕುಶಾಲನಗರ 250, ವಿರಾಜಪೇಟೆ 140, ಸೋಮವಾರಪೇಟೆ 70 ಹಾಗೂ ಹೆಬ್ಬಾಲೆಯಲ್ಲಿ ಸುಮಾರು 70 ಬಸ್‌ಗಳು ಸಂಚರಿಸುತ್ತವೆ. ರಾಜ್ಯ ಸರ್ಕಾರದ 'ಶಕ್ತಿ' ಯೋಜನೆಗೆ ಸಮಾರು 10 ಸಾವಿರಕ್ಕೂ ಅಧಿಕ ಮಂದಿ ಫಲಾನುಭವಿಗಳು ಇರಬಹುದು ಎಂದು ಮೊದಲು ಅಂದಾಜು ಮಾಡಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಮಹಿಳಾ ಪ್ರಯಾಣಿಕರು ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ.

ಮೈಸೂರು ಮತ್ತು ಮಡಿಕೇರಿ, ಕುಶಾಲನಗರ ಮತ್ತು ಮಡಿಕೇರಿ, ಭಾಗಮಂಡಲ ಮತ್ತು ಮಡಿಕೇರಿ ಮಧ್ಯೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ನೌಕರರು ದಿನನಿತ್ಯ ಓಡಾಡುತ್ತಾರೆ. ಹೀಗೆ ಪ್ರತಿದಿನ ಸಂಚರಿಸುವ ಮಹಿಳೆಯರಿಗೆ 'ಶಕ್ತಿ'ನ ಯೋಜನೆ ಮತ್ತಷ್ಟು ಶಕ್ತಿ ನೀಡಿದೆ. ಮೊದಲೆಲ್ಲಾ ಪೇಯಿಂಗ್ ಗೆಸ್ಟ್, ಹಾಸ್ಟೆಲ್‌ಗಳಲ್ಲಿ ಇದ್ದವರೂ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಸ್ವ ಸ್ಥಳದಿಂದಲೇ ಹತ್ತಿರದ ಕರ್ತವ್ಯದ ಸ್ಥಳ ಹಾಗೂ ಶಾಲಾ, ಕಾಲೇಜುಗಳಿಗೆ ತೆರಳಲು ಆರಂಭಿಸಿದ್ದಾರೆ.

'ಶಕ್ತಿ' ಯೋಜನೆ ಜಾರಿಗೆ ಬಂದ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆ ಜಾಸ್ತಿ ಆಗಿದೆ. ಆದರೆ ಬಸ್‌ಗಳ ಸಂಖ್ಯೆಯಲ್ಲಿ ಹೆಚ್ಚಿನ ಏನೂ ಬದಲಾವಣೆ ಆಗಿಲ್ಲ. ಹಾಗಾಗಿ ಬಹುತೇಕ ಸಂದರ್ಭಗಳಲ್ಲಿ ಕಿಕ್ಕಿರಿದು ತುಂಬಿರುವ ಬಸ್‌ಗಳು ಸಂಚರಿಸುವುದನ್ನು ಕಾಣಬಹುದು. ಉಳಿದ ಕಡೆಗಳಿಗೆ ಹೋಲಿಸಿದರೆ ಕುಶಾಲನಗರ-ಮಡಿಕೇರಿ ಮಧ್ಯೆ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಅದರಲ್ಲೂ ಬೆಳಗ್ಗಿನ 8.30ರಿಂದ 10.30ರ ತನಕ ಬಸ್‌ಗಳಿಲ್ಲದೆ ಕುಶಾಲನಗರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವುದು ಸಾಮಾನ್ಯ ಎಂಬAತಾಗಿದೆ. ಮಡಿಕೇರಿಯಲ್ಲಿ ಸಂಜೆ 4.30-6.30ರ ತನಕ ಇಂಥದ್ದೇ ಪರಿಸ್ಥಿತಿ ಇರುತ್ತದೆ. ಈ ಸಂಬAಧ ಅಗತ್ಯ ಸಂದರ್ಭಗಳಲ್ಲಿ ಬಸ್‌ಗಳ ಸಂಖ್ಯೆ ಹೆಚ್ಚಿಸುವಂತೆ ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನ ಆಗಿಲ್ಲ ಎನ್ನುವುದು ಈ ಮಾರ್ಗದಲ್ಲಿ ಪ್ರತಿನಿತ್ಯ ಸಂಚರಿಸುವವರ ಅಳಲು.

ನಮ್ಮ ಜಿಲ್ಲೆಯಲ್ಲಿ ಸುಮಾರು 1.10 ಕೋಟಿ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಈ ಮೂಲಕ ಕೆಎಸ್‌ಆರ್‌ಟಿಸಿ ಆದಾಯವೂ ಜಾಸ್ತಿ ಆಗಿದೆ. ಬಸ್‌ಗಳ ಕೊರತೆ ಇರುವುದು ನಮ್ಮ ಗಮನಕ್ಕೂ ಬಂದಿದೆ. ಸಾರಿಗೆ ಸಚಿವರ ಜತೆ ಈ ಬಗ್ಗೆ ಚರ್ಚಿಸಲಾಗಿದ್ದು, ಕೊಡಗಿಗೆ ಹೆಚ್ಚುವರಿ ಬಸ್‌ಗಳಿಗೆ ಬೇಡಿಕೆ ಇಡಲಾಗಿದೆ. ಕುಶಾಲನಗರದಲ್ಲಿ ಡಿಪೋ ಆದ ನಂತರ ಬಹುತೇಕ ಸಮಸ್ಯೆಗಳು ಬಗೆಹರಿಯಲಿದೆ.

ಡಾ. ಮಂತರ್ ಗೌಡ, ಮಡಿಕೇರಿ ಶಾಸಕ

ಸರ್ಕಾರದ ಗ್ಯಾರಂಟಿ ಯೋಜನೆಗಳು ಕಡ್ಡಾಯವಾಗಿ ಅರ್ಹರಿಗೆ ತಲುಪಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಜಿಲ್ಲೆಯ ಹಲವು ಭಾಗಗಗಳಿಗೆ ಸರ್ಕಾರಿ ಬಸ್ ಸಂಪರ್ಕ ಈಗಾಗಲೇ ಒದಗಿಸಲಾಗಿದೆ. ಇನ್ನೂ ಹಲವು ಹೊಸ ಬಸ್ ಮಾರ್ಗಗಳಿದ್ದು ಅಲ್ಲಿಗೂ ಸೂಕ್ತ ಸಂಪರ್ಕ ಒದಗಿಸುವಂತೆ ಕೆಎಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಸ್‌ಗಳ ಸಮಸ್ಯೆ ಬಗ್ಗೆ ಶಾಸಕರ ಗಮನವನ್ನೂ ಸೆಳೆಯಲಾಗಿದ್ದು, ಸಕರಾತ್ಮಕ ಸ್ಪಂದನೆ ಸಿಕ್ಕಿದೆ.

ಧರ್ಮಜ ಉತ್ತಪ್ಪ, ಜಿಲ್ಲಾ ಅಧ್ಯಕ್ಷ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ