ಜಿಲ್ಲೆ

ಶಕ್ತಿ ಯೋಜನೆಯಿಂದ ಮಹಿಳೆ ಸಬಲೀಕರಣ

ಗೋಪಾಲಕೃಷ್ಣ ಪಾದೂರ್

 ಉಡುಪಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯು ಮಹಿಳಾ ಸಬಲೀಕರಣಕ್ಕೆ ಬಲ ನೀಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದರು.

ಬನ್ನಂಜೆಯ ಕೆ.ಎಸ್​.ಆರ್​.ಟಿ.ಸಿ ಬಸ್​ ನಿಲ್ದಾಣದ ಆವರಣದಲ್ಲಿ ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ವತಿಯಿಂದ ನಡೆದ ಶಕ್ತಿ ಯೋಜನೆಯ ಸಂಭ್ರಮ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಯಶಸ್ವಿಯಾಗಿ ಜಾರಿಗೊಳಿಸಿದೆ. 2023, ಜೂನ್​ 11 ರಂದು ಶಕ್ತಿ ಯೋಜನೆಗೆ ಮೊದಲು ಜಾರಿಗೆ ತರಲಾಗಿದ್ದು, ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಯೋಜನೆ ಜಾರಿಯಾದಾಗಿನಿಂದ ಈವರೆಗೆ 500 ಕೋಟಿ ಟಿಕೇಟ್​ ವಿತರಿಸಲಾಗಿದ್ದು, ಸರ್ಕಾರ 12,000 ಕೋಟಿ ರೂ. ಹೆಚ್ಚು ಹಣ ರಾಜ್ಯ ಸಾರಿಗೆ ನಿಗಮಕ್ಕೆ ಭರಿಸಿದೆ ಎಂದರು.

ಶಕ್ತಿ ಯೋಜನೆಯ ಅನುಷ್ಠಾನದಿಂದಾಗಿ ಹೆಣ್ಣು ಮಕ್ಕಳು ಪ್ರಯಾಣಕ್ಕೆ ಮನೆಯ ಯಜಮಾನರ ಅವಲಂಭಿಸುವುದು ತಪ್ಪಿದಂತೆ ಆಗಿದೆ. ಹೆಣ್ಣು ಮಕ್ಕಳು ಸ್ವಂತ- ಉದ್ಯೋಗಕ್ಕಾಗಿ, ಶಿಕ್ಷಣವಂತರಾಗಲು ಹಾಗೂ ಮತ್ತಿತರ ದೈನಂದಿನ ಚಟುವಟಿಕೆಗಾಗಿ ಪ್ರಯಾಣಿಸಲು ಶಕ್ತಿ ಯೋಜನೆ ಸಹಕಾರಿಯಾಗಿದೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್​ ಕೊಡವೂರು ಮಾತನಾಡಿ, ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ 2023 ರ ಜೂನ್​ನಿಂದ ಈವರೆಗೆ 2.57 ಕೋಟಿ ಹೆಚ್ಚು ಟಿಕೇಟ್​ ಮಹಿಳೆಯರಿಗೆ ವಿತರಿಸಲಾಗಿದ್ದು, 90.10 ಕೋಟಿ ರೂ. ಭರಿಸಲಾಗಿದೆ ಎಂದರು.

ಮಾಜಿ ಸಚಿವ ವಿನಯ್​ ಕುಮಾರ್​ ಸೊರಕೆ ಮಾತನಾಡಿದರು. ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ವೀಣಾ ವಾಗ್ಳೆ, ಉಡುಪಿ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್​ ಕಾಂಚನ್​, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್​ ಬಿ, ರೆಡ್​ಕ್ರಾಸ್​ ಕಾರ್ಯದರ್ಶಿ ಗಣನಾಥ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಿಗಮದ ಬಸ್ಸಿಗೆ ಪೂಜೆ ಸಲ್ಲಿಸಿ, ಮಹಿಳಾ ಪ್ರಯಾಣಿಕರಿಗೆ ಗುಲಾಬಿ ಹೂವು ನೀಡಿ, ಸಿಹಿತಿಂಡಿ ವಿತರಿಸಲಾಯಿತು.