ಜಿಲ್ಲೆ

ಸನಾತನ ಧರ್ಮವನ್ನು ಉಚ್ಛ್ರಾಯಸ್ಥಿತಿಗೆ ತಂದ ಶಂಕರಾಚಾರ್ಯ

ಲಲಾಟಾಕ್ಷ ಎಸ್

ಹುಣಸೂರು: ಶಂಕರ ಭಗವತ್ಪಾದರು 8ನೇ ಶತಮಾನದಲ್ಲಿ ಅಳಿವಿನ ಸ್ಥಿತಿಗೆ ತಲುಪಿದ್ದ ಸನಾತನ ಧರ್ಮವನ್ನು ಮತ್ತೆ ಉಚ್ಛ್ರಾಯಸ್ಥಿತಿಗೆ ತಂದು ಉಳಿಸಿಕೊಟ್ಟ ಮಹಾನ್ ಸಂತ ಎಂದು ಸಂಸ್ಕೃತ ವಿದ್ವಾಂಸ ಡಾ.ಗುರುಮೂರ್ತಿ ಅಭಿಪ್ರಾಯಪಟ್ಟರು.


ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಅಖಿಲ ಭಾರತ ಬ್ರಾಹ್ಮಣ ಸಭಾ ಮತ್ತು ವಿಪ್ರ ಮಹಿಳಾ ಸಂಘ ಹುಣಸೂರು ಘಟಕಗಳ ಸಹಯೋಗದಲ್ಲಿ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 8ನೇ ಶತಮಾನದ ಕಾಲಘಟ್ಟದಲ್ಲಿ ದೇಶದಲ್ಲಿ ಸನಾತನ ಧರ್ಮ ದೈನೇಸಿ ಸ್ಥಿತಿ ತಲುಪಿತ್ತು. ವಿಪರ್ಯಾಸವೆಂದರೆ ಇಂದೂ ಕೂಡ ಅದಕ್ಕಿಂತ ಮಿಗಿಲಾಗಿಲ್ಲ. ವಿವಿಧ ಪಂಥಗಳು ಮತ್ತು ಆಡಳಿತಗಾರರು ಸನಾತನ ಧರ್ಮದ ಕುರಿತಾಗಿ ಜನರನ್ನು ತಪ್ಪು ದಾರಿಗೆ ಎಳೆದ ಪರಿಣಾಮ ಸನಾತನ ಧರ್ಮದ ಅಸ್ತಿತ್ವಕ್ಕೆ ಸಂಚಕಾರ ತಂದಿತ್ತು ಎಂದರು.


ಕೇರಳದ ಕಾಲಡಿಯಲ್ಲಿ ಹುಟ್ಟಿದ ಶಂಕರ ಭಗವತ್ಪಾದರು ಸನಾತನ ಧರ್ಮದ ಪರಿಪಾಲಕರಾಗಿ ಧರ್ಮಸ್ಥಾಪನೆಯನ್ನು ಯಶಸ್ವಿಯಾಗಿ ನಡೆಸಿದರು. ತಮ್ಮ 8ನೇ ವಯಸ್ಸಿಗೆ ಸನ್ಯಾಸತ್ವ ಸ್ವೀಕರಿಸಿ ನಂತರದ ದಿನಗಳಲ್ಲಿ ಗುರುವಿನ ಅನ್ವೇಷಣೆಯೊಂದಿಗೆ ಕೋಟಿ ಶಿಷ್ಯವೃಂದವನ್ನು ಸಂಪಾದಿಸಿದರು. ಅದ್ವೈತ ಸಿದ್ಧಾಂತ ಪ್ರತಿಪಾದಕರಾಗಿ ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ವೇದಗಳ ಮಹತ್ವವನ್ನು ಸಾರುವ ಮಠಗಳನ್ನು ಸ್ಥಾಪಿಸಿ ಧರ್ಮದ ಭದ್ರ ಬುನಾದಿ ಹಾಕಿದರು. ಶಂಕರ ಎಂದರೆ ಮಂಗಳವನ್ನು ಉಂಟುಮಾಡುವುದು ಎಂದರ್ಥ. ಕೇವಲ 32ವರ್ಷಗಳ ಜೀವಿತಾವಧಿಯಲ್ಲಿ ಇಡೀ ಲೋಕಕ್ಕೆ ಈ ಶಂಕರ ಮಂಗಳವನ್ನುಂಟುಮಾಡಿದ್ದಾರೆ. ಸ್ವಾರ್ಥಕ್ಕಾಗಿ ಏನನ್ನೂ ಮಾಡದೆ ಪರರಿಗಾಗಿ ದುಡಿಯಿರಿ ಎಂದು ತಿಳಿಸಿದ್ದಾರೆ. ಅಂತೆಯೇ ತಮಿಳುನಾಡಿನಲ್ಲಿ ಹುಟ್ಟಿದ ರಾಮಾನುಜಾಚಾರ್ಯರು ಭಕ್ತಿಮಾರ್ಗದ ಮೂಲಕ ಧರ್ಮಸ್ಥಾಪನೆಯ ಕಾರ್ಯವನ್ನು ನಡೆಸಿದರೆ. ಶಂಕರರು ಜ್ಞಾನಮಾರ್ಗದ ಮೂಲಕ ದೈವತ್ವವನ್ನು ಕಾಣಲು ತಿಳಿಸಿದ್ದಾರೆ ಎಂದರು.


ಗ್ರೇಡ್ 2 ತಹಸೀಲ್ದಾರ್ ನರಸಿಂಹಯ್ಯ, ಶಿರಸ್ತೇದಾರ್ ಶ್ರೀಪಾದ್, ಬ್ರಾಹ್ಮಣಸಭಾ ತಾಲೂಕು ಅಧ್ಯಕ್ಷ ಭಾಸ್ಕರ್ ಭಟ್, ಕಾರ್ಯದರ್ಶಿ ನಾಗರಾಜ್, ಮಹಿಳಾ ಘಟಕದ ಘಟಕದ ಅಧ್ಯಕ್ಷೆ ಸತ್ಯವತಿ, ಕಾರ್ಯದರ್ಶಿ ಕಮಲಾ ಪ್ರಕಾಶ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯ ಜಯರಾಂ, ವಿಪ್ರಸಮಾಜದ ಮುಖಂಡರಾದ ವಿ.ಎನ್.ದಾಸ್, ರಾಧಾಕೃಷ್ಣ, ವಾಸುಕಿ, ಭಾಸ್ಕರ್, ರವಿಶಂಕರ್, ರಾಘವ, ಸುಬ್ರಹ್ಮಣ್ಯ, ಗಿರೀಶ್ ಹಾಜರಿದ್ದರು.