ಜಿಲ್ಲೆ

ಶಹಾಬಾದ್: ಹಳೇ ಕೇಬಲ್ ಬದಲಾವಣೆ, ಸಮಸ್ಯೆಗೆ ಮುಕ್ತಿ

ಕೃಷ್ಣ ಕುಲಕರ್ಣಿ

ಶಹಾಬಾದ್: ವಿವಿಧ ಬಡಾವಣೆಗಳಲ್ಲಿ 10 ವರ್ಷದ ಹಳೇ ಎಲ್‌ಟಿ ವಿದ್ಯುತ್ ಎಬಿ ಕೇಬಲ್‌ಗಳಿಂದ ವಿದ್ಯುತ್ ಸರಬರಾಜಿಗೆ ಸಮಸ್ಯೆ ಆಗುತ್ತಿತ್ತು. ಹೀಗಾಗಿ ಎಲ್ಲ ತಂತಿಗಳನ್ನು ಬದಲಾಯಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗಿದೆ ಎಂದು ಜೆಸ್ಕಾಂ ಉಪವಿಭಾಗದ ಶಾಖಾಧಿಕಾರಿ ಮಹೇಶ ಕುಂಬಾರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಅವರು, ಜೆಸ್ಕಾಂ ಗ್ರಾಮೀಣ ವಿಭಾಗ-2 ಶಹಾಬಾದ್ ಉಪ ವಿಭಾಗದ ವ್ಯಾಪ್ತಿಗೆ ಬರುವ 100 ಕೆವಿಎ ಪ್ರವರ್ತಕ ಮಡ್ಡಿ ನಂ.2 ಎಚ್‌ಎಂಪಿ ರೋಡ್, 100 ಕೆವಿಎ ಪ್ರವರ್ತಕ ಮಡ್ಡಿ 2 ಕಾಳನೂರ ಬಡಾವಣೆ, ಹಳೇ ಶಹಾಬಾದ್ 250 ಕೆವಿಎ ಪ್ರವರ್ತಕ ವಿವೇಕಾನಂದ ಚೌಕ್, 63 ಕೆವಿಎ ಪ್ರವರ್ತಕ ಕೊಳಸಾ ಫೈಲ್ ಬಡಾವಣೆ, 63 ಕೆವಿಎ ಪ್ರವರ್ತಕ ಸಂತೋಷ ಇಂಗಿನಶೆಟ್ಟಿ ಕಾಲನಿಯಲ್ಲಿ ಹಳೆಯ ಎಲ್‌ಟಿ ವಿದ್ಯುತ್ ಎಬಿ ಕೇಬಲಗಳಿದ್ದು, ನಿರಂತರ ತುಂಡಾಗಿ ಸಾಕಷ್ಟು ಸಮಸ್ಯೆ ಆಗುತ್ತಿತ್ತು ಎಂದು ಹೇಳಿದ್ದಾರೆ.

ಈ ಸಮಸ್ಯೆಯನ್ನು ಉಪ ವಿಭಾಗದ ಎಇಇ ಸೈಯ್ಯದ್ ಯುನೂಸ್ ಅವರು ಕಲಬುರಗಿ ಗ್ರಾಮೀಣ ವಿಭಾಗ-2ರ ಕಾರ್ಯಪಾಲನೆ ಇಇ ಮುರುಗೇಶ ಮಠಪತಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಬಳಿಕ ಪ್ರಥಮ ದರ್ಜೆ ಗುತ್ತಿಗೆದಾರ ಅಶೋಕ ಕಮರಡಗಿ ಅವರ ಮೂಲಕ ಬಡಾವಣೆಗಳಲ್ಲಿನ ಹಳೆಯ ಕೇಬಲ್‌ಗಳನ್ನು ಬಸಲಾಯಿಸಿ, ವಿದ್ಯುತ್ ಕಡಿತ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.