ಕೂಡ್ಲಿಗಿ: ಪಟ್ಟಣದ ರಾಜೀವ್ ಗಾಂಧಿ ನಗರಕ್ಕೆ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಶೇಕ್ ಗುರುವಾರ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದರು.
ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಮಾತನಾಡಿ, ಬಡಾವಣೆಯಲ್ಲಿ ಇತ್ತೀಚಿಗೆ ಸಿಸಿ ರಸ್ತೆ ನಿರ್ಮಿಸಲಾಗಿದ್ದು, ಪ್ರಸ್ತುತ ಹಾಸ್ಟೆಲ್ ನಿರ್ಮಾಣ ಮಾಡಲು 20 ಸೆಂಟ್ಸ್ ಜಾಗ ಬೇಕಾಗಿದೆ. ಸಿರಾಜ್ ಶೇಖ್ ಶಾಸಕರಾಗಿದ್ದಾಗ ರಾಜೀವ್ ಗಾಂಧಿ ಹೆಸರಲ್ಲಿ ಬಡಾವಣೆ ನಿರ್ಮಾಣ ಮಾಡಿ ನೂರಾರು ಬಡ ಜನರಿಗೆ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಅಂತಹ ನಗರದಲ್ಲಿ ಸಾಕಷ್ಟು ಅನುದಾನ ಹಾಕಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಉಳಿದ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುವುದು. ಶಾದಿ ಮಹಲ್ ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಿದ್ದು, ಅದನ್ನು ವಕ್ಫ್ ಬೋರ್ಡಿಗೆ ಹಸ್ತಾಂತರ ಮಾಡಿ, ನಿರ್ಮಾಣ ಮಾಡಲು ಸಿದ್ಧತೆ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಶೇಖ್ ಮಾತನಾಡಿ, 2002ರಲ್ಲಿ ರಾಜೀವ್ ಗಾಂಧಿ ನಗರ ನಿರ್ಮಿಸಲಾಗಿತ್ತು. 2004ರಿಂದ ಈ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರು ಇರಲಿಲ್ಲವಾದ್ದರಿಂದ ಕಾಲನಿ ಅಭಿವೃದ್ಧಿ ಕುಂಠಿತಗೊಂಡಿತ್ತು. ಇಲ್ಲಿರುವ ರಂಗ ಮಂದಿರ ಸರಿಯಾಗಿ ಉಪಯೋಗವಾಗಿಲ್ಲ. ಅದನ್ನು ನವೀಕರಣ ಮಾಡಿ, ಸಾರ್ವಜನಿಕರಿಗೆ ಕಲ್ಯಾಣ ಮಂಟಪ ರೀತಿಯಲ್ಲಿ ಬಳಕೆಯಾಗುವಂತೆ ಮಾಡಲಾಗುವುದು ಎಂದರು.
ಪ್ರಮುಖರಾದ ಹಿರೇಕುಂಬಳಗುಂಟೆ ಉಮೇಶ, ಟಿ.ಜಿ. ಮಲ್ಲಿಕಾರ್ಜುನಗೌಡ, ಜಿ. ನಾಗಮಣಿ, ಕೋಗಳಿ ಮಂಜುನಾಥ, ನಲ್ಲಮುತ್ತಿ ದುರುಗೇಶ, ಬಾಷಾ ಸಾಬ್, ಜಿಲಾನ್, ಅಬುಲ್ಲಾ ಸಾಬ್ ಇತರರಿದ್ದರು.