ಜಿಲ್ಲೆ

ಶಬರಿಮಲೆ ಯಾತ್ರೆ ಮುಂದೂಡಲು ಆಗ್ರಹ, ಮೂಲಸೌಕರ್ಯ ಕೊರತೆಯೊಂದಿಗೆ ಯಾತ್ರೆ ಆರಂಭ ಆರೋಪ

Dakshina Kannada

ಮಂಗಳೂರು: ಕರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರೆಯನ್ನು ಮುಂದೂಡಬೇಕು, ಅಲ್ಲಿ ಮೂಲಸೌಕರ್ಯ ಕೊರತೆಯೊಂದಿಗೆ ಯಾತ್ರೆ ಆರಂಭಿಸಿದ್ದು ಸರಿಯಾದ ಕ್ರಮವಲ್ಲ ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ದ.ಕ ಜಿಲ್ಲಾ ಶಾಖೆ ಒತ್ತಾಯಿಸಿದೆ.

ಈ ಬಾರಿಯ ಶಬರಿಮಲೆ ಯಾತ್ರೆ ವಿಚಾರವಾಗಿ ಕೇರಳ ಸರ್ಕಾರ ಪಂದಳ ರಾಜವಂಶ, ಅರ್ಚಕರು ಮತ್ತು ಅಲ್ಲಿನ ಹಿಂದು ಮುಖಂಡರ ಜತೆ ಚರ್ಚಿಸದೆ ಯಾತ್ರೆ ಪ್ರಾರಂಭಿಸಿದ್ದಾರೆ. ಆ ಮೂಲಕ ಶಬರಿಮಲೆಯ ಸಂಪ್ರದಾಯವನ್ನು ಗಾಳಿಗೆ ತೂರಿದ್ದಾರೆ ಎಂದು ಸಮಾಜದ ಅಧ್ಯಕ್ಷ ಗಣೇಶ್ ಕೆ.ಪೊದುವಾಳ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಶಬರಿಮಲೆಯ ಸಂಪ್ರದಾಯವಾದ ಪಂಪಾ ನದಿಯಲ್ಲಿ ಸ್ನಾನ ಮಾಡುವುದು ಹಾಗೂ ಹರಕೆ ರೂಪದಲ್ಲಿ ತುಪ್ಪದ ಕಾಯಿಯ ಅಭಿಷೇಕವನ್ನೂ ನಿಷೇಧಿಸಿದೆ. ಪಂಪಾ ನದಿಯಲ್ಲಿ ಮೀಯುವ ಬದಲು ನೀಲಕ್ಕಲ್‌ನಲ್ಲಿ ಷವರ್ ಸೌಲಭ್ಯ ನೀಡಲಾಗಿದೆ. ಆದರೆ ಪಂಪೆಯಲ್ಲಿ ಸ್ನಾನ ಮಾಡಿದರಷ್ಟೇ ಭಕ್ತರಿಗೆ ಅನುಕೂಲ. ಕೇವಲ ಆದಾಯದ ಉದ್ದೇಶವಿಟ್ಟುಕೊಂಡು ಸರ್ಕಾರ ಈ ಯಾತ್ರೆ ಆರಂಭಿಸಿದೆಯೇ ಹೊರತು ಅನುಕೂಲ ಕಲ್ಪಿಸಿಲ್ಲ ಎಂದು ಇತ್ತೀಚೆಗಷ್ಟೇ ಯಾತ್ರೆ ತೆರಳಿ ಬಂದಿರುವ ಉಳ್ಳಾಲದ ಅಯ್ಯಪ್ಪ ಭಕ್ತ ಸುಧೀರ್ ಬಂಗೇರ ತಿಳಿಸಿದರು.

ಶಬರಿಮಲೆ ಯಾತ್ರೆ ಸದ್ಯ ಸೂಕ್ತವಲ್ಲ, ಹಾಗಾಗಿ ಅದನ್ನು ಸ್ಥಗಿತಗೊಳಿಸಬೇಕು ಎಂದು ಎಸ್‌ಎಎಸ್‌ಎಸ್ ವತಿಯಿಂದ ಕೇರಳ ರಾಜ್ಯಪಾಲರಿಗೆ ಶೀಘ್ರ ಮನವಿ ಸಲ್ಲಿಸಲಾಗುವುದು ಎಂದು ಪೊದುವಾಳ್ ತಿಳಿಸಿದರು.

ಕಾರ್ಯದರ್ಶಿ ಶರತ್ ಕೊಂಬಾರ್, ಗೌರವಾಧ್ಯಕ್ಷ ವಿಶ್ವನಾಥ್ ಕಾಯರ್‌ಪಲ್ಕೆ, ಕಾತ್ಯಾಯಿನಿ, ಮೋಹನ್ ಬರ್ಕೆ ಹಾಜರಿದ್ದರು.