ಜಿಲ್ಲೆ

ಶಾದಿ ಮಹಲ್ ಕಟ್ಟಡ ಪರಿಶೀಲನೆ

Chamarajanagar

ಕೊಳ್ಳೇಗಾಲ: ಪಟ್ಟಣದಲ್ಲಿ ನನೆಗುದಿಗೆ ಬಿದ್ದಿರುವ ಶಾದಿ ಮಹಲ್ ಕಟ್ಟಡವನ್ನು ಶುಕ್ರವಾರ ಶಾಸಕ ಎನ್.ಮಹೇಶ್ ಅವರು ಅಂಜುಮನ್-ಎ-ಇಸ್ಲಾಮಿಯ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2008ರಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಶಾದಿ ಮಹಲ್ ಕಟ್ಟಡ ತಲೆ ಎತ್ತಿದೆ. ಈ ನಡುವೆ ಪಟ್ಟಣದ ಅಂಜುಮನ್-ಎ-ಇಸ್ಲಾಮಿಯ ಸಂಸ್ಥೆ 20 ಲಕ್ಷ ರೂ. ಹಾಗೂ ಕ್ಷೇತ್ರದ ಹಿಂದಿನ ಶಾಸಕ, ಸಂಸದರ ಪ್ರದೇಶಾಭಿವೃದ್ಧಿ ಅನುದಾನದಿಂದ ಕಾಮಗಾರಿ ಮುಂದುವರಿಸಲಾಗಿದೆ. ಆದರೂ ಕಟ್ಟಡ ಇನ್ನೂ ಫಿಲ್ಲರ್ ಮತ್ತು ಛಾವಣಿಯಿಂದ ಕೂಡಿದ್ದು, ಯಾವುದಕ್ಕೂ ಪ್ರಯೋಜನವಾಗದಂತಾಗಿದೆ ಎಂದರು.

ಇತ್ತೀಚೆಗೆ ಅಂಜುಮನ್-ಎ-ಇಸ್ಲಾಮಿಯ ಸಂಸ್ಥೆ ನೂತನ ಪದಾಧಿಕಾರಿಗಳು ತಮ್ಮ ಗಮನಕ್ಕೆ ಈ ವಿಚಾರವನ್ನು ತಂದು ಕೂಡಲೇ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಗೊಳಿಸಿ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಭೇಟಿ ನೀಡಿದ್ದೇನೆ. ಕಟ್ಟಡ ಪೂರ್ಣಗೊಳಿಸಲು ಬೇಕಿರುವ ಅನುದಾನ ಕುರಿತು ನಿರ್ಮಿತಿ ಕೇಂದ್ರದ ಇಂಜಿನಿಯರ್ ಪ್ರತಾಪ್‌ಗೆ ತಿಳಿಸಿದ್ದು, ಅವರಿಂದ ಎಸ್ಟಿಮೆಂಟ್ ಬರುತ್ತಿದ್ದಂತೆ ಸರ್ಕಾರ ಮತ್ತು ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನವನ್ನು ನೀಡಿ ಕಟ್ಟಡ ಪೂರ್ಣಗೊಳಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಬೇಡಿಕೆ ಈಡೇರಿಕೆಗೆ ಮನವಿ: ಅಂಜುಮನ್-ಎ-ಇಸ್ಲಾಮಿಯ ಸಂಸ್ಥೆಯ ಅಧ್ಯಕ್ಷ ಸಮೀವುಲ್ಲಾ, ಉಪಾಧ್ಯಕ್ಷ ಎ.ಪಿ.ಅಕ್ರಂಪಾಷ, ಕಾರ್ಯದರ್ಶಿ ಕೆ.ಎಂ.ಅನ್ವರ್ ಬಾಷಾ, ಖಜಾಂಚಿ ಇಬ್ರಾನ್‌ಖಾನ್ ಇತರ ಪದಾಧಿಕಾರಿಗಳು ಶಾಸಕ ಎನ್.ಮಹೇಶ್ ಅವರಿಗೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ 100 ವರ್ಷಗಳ ಖಬರಸ್ತಾನ್ ಸ್ಮಶಾನವಿದ್ದು, ಈ ಸ್ಥಳ ಚಿಕ್ಕದಾಗಿದೆ. ಇಂದಿನ ಮುಸಲ್ಮಾನ್ ಜನಸಂಖ್ಯೆಗನುಗುಣವಾಗಿಲ್ಲ. ಆದ್ದರಿಂದ ಬೇರೆಡೆ ಸರ್ಕಾರದಿಂದ ಸ್ಮಶಾನಕ್ಕೆ ಸ್ಥಳ ಕೊಡಿಸಬೇಕು. ನಗರಸಭೆ ಕಚೇರಿ ಬಳಿಯಲ್ಲಿರುವ 113 ವರ್ಷ ಇತಿಹಾಸವುಳ್ಳ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ದುರಸ್ತಿಗೊಳಿಸುವ ಜತೆಗೆ ಆಂಗ್ಲ ಮಾಧ್ಯಮ ತರಗತಿ ಆರಂಭಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸುವುದಾಗಿ ತಿಳಿಸಿದರು.

ನಗರಸಭಾ ಆಯುಕ್ತ ನಾಗಶೆಟ್ಟಿ, ನಗರಸಭಾ ಸದಸ್ಯ ನಾಸೀರ್ ಷರೀಫ್ ಸೇರಿ ಇತರರು ಹಾಜರಿದ್ದರು.