ಬೆಳಗಾವಿ: ಭೀಕರ ಬರಗಾಲದಿಂದ ತತ್ತರಿಸುತ್ತಿರುವ ರೈತರು ರಾಮದುರ್ಗ ತಾಲೂಕಿನ ಉದಪುಡಿಯ ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಜಿಲ್ಲಾಧಿಕಾರಿ ಗೆ ದೂರು ಸಲ್ಲಿಸಿದ್ದಾರೆ.
ಉದಪುಡಿ ಗ್ರಾಮದ ಶಿವಸಾಗರ ಸಕ್ಕರೆ ಕಾರ್ಖಾನೆಯನ್ನು ಇತ್ತೀಚಿನ ವರ್ಷಗಳಲ್ಲಿ ಅರಿಹಂತ ಇಂಡಸ್ಟ್ರೀಸ್‌ನವರು ಲೀಸ್ ಮೇಲೆ ನಡೆಸುತ್ತಾ ಬಂದಿದ್ದರು. ಆದ್ರೆ ಈಗ ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಷೇರುದಾರರಿಗೆ, ಕಾರ್ಮಿಕರಿಗೆ ಹಾಗೂ ಕಬ್ಬಿನ ಬಾಕಿ ಬಿಲ್ ಉಳಿಸಿಕೊಂಡ ರೈತರಿಗೆ ಮಾಹಿತಿಯನ್ನು ನೀಡದೇ ಹರಾಜು ಮಾಡಿದ್ದಾರೆಎಂದು ದೂರಿದ್ದಾರೆ.
75 ಸಾವಿರ ಷೇರುದಾರರ ಸುಮಾರು 37 ಕೋಟಿ ಹಣವನ್ನು ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರು ಮರಳಿ ನೀಡಬೇಕು ಹಾಗೂ 300ಕ್ಕೂ ಹೆಚ್ಚು ಕಾರ್ಮಿಕರಿಗೆ ಮರಳಿ ಕೆಲಸ ನೀಡುವಂತೆ ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ, ಡಿಸಿ ಮೊಹಮ್ಮದ್ ರೋಷನ್ ಹಾಗೂ ಎಸ್‌ಪಿ ಭೀಮಾಶಂಕರ ಗುಳೇದ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಿತು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತರು ಹಾಗೂ ಷೇರುದಾರರು ಸಮಸ್ಯೆ ಹಂಚಿಕೊಂಡರು. ಸಾಲಸೋಲ ಮಾಡಿ ಮಹಿಳೆಯರು ಷೇರು ಖರೀದಿಸಿದ್ದು ಮಹಿಳೆಯರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ಕಬ್ಬಿನ ಬಾಕಿ ಬಿಲ್ ಇರುವ ರೈತರು ನ್ಯಾಯಾಲಯಕ್ಕೆ ಹೋಗಿ ಮನವಿ ಸಲ್ಲಿಸಲು ಆಗಲ್ಲ. ನಾವೇ ಎಲ್ಲಾ ಸಮಸ್ಯೆ ಪರಿಹಾರ ಒದಗಿಸುವ ಕೆಲಸ ಮಾಡ್ತೇವೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭರವಸೆ ನೀಡಿದ್ದಾರೆ.