ಸೇಡಂ: ಸಮಾನತೆಯ ಪ್ರತಿಪಾದನೆಯೊಂದಿಗೆ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸುವ ಮೂಲಕ ಜಗತ್ತಿಗೆ ಸಂಸತ್ ಪರಿಕಲ್ಪನೆ ನೀಡಿದ ಕೀರ್ತಿ ಜಗಜ್ಯೋತಿ ಬಸವಣ್ಣ ಅವರಿಗೆ ಸಲ್ಲುತ್ತದೆ ಎಂದು ಬಾಲಗಾಂವ್ ಗುರುದೇವಾಶ್ರಮದ ಶ್ರೀ ಅಮೃತಾನಂದ ಸ್ವಾಮೀಜಿ ಹೇಳಿದರು.
ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಜಗಜ್ಯೋತಿ ಬಸವೇಶ್ವರರ ೮೯೧ನೇ ಜಯಂತ್ಯುತ್ಸವ ನಿಮಿತ್ತ ವೀರಶೈವ ಮಹಾಸಭಾ, ಮಹಾತ್ಮ ಬಸವೇಶ್ವರ ಸೇವಾ ಬಳಗ, ಬಸವ ಕೇಂದ್ರ, ಬಸವ ಉತ್ಸವ ಸಮಿತಿ, ವೀರಶೈವ ಲಿಂಗಾಯತ ಸೌಹಾರ್ದ ಪತ್ತಿನ ಸಹಕಾರ ಸಂಘ, ವೀರಶೈವ ಮಹಿಳಾ ಫೌಂಡೇಷನ್, ವೀರಶೈವ ಲಿಂಗಾಯತ ಎಜುಕೇಷನ್ ಟ್ರಸ್ಟ್, ಬಸವ ಗೆಳೆಯರ ಬಳಗದಿಂದ ಭಾನುವಾರ ಆಯೋಸಿದ್ದ ಧರ್ಮ ಸಭೆಯಲ್ಲಿ ಅನುಭಾವಾಮೃತ ನೀಡಿದರು.
೧೨ನೇ ಶತಮಾನದಲ್ಲಿ ಬಸವಣ್ಣ ಅವರು ವಚನಗಳ ಮೂಲಕ ಸಮಾಜದಲ್ಲಿ ಕ್ರಾಂತಿ ಮಾಡಿ, ಹಿಂದುಳಿದವರಿಗೆ ಬೆಳಕಾಗಿದ್ದರು. ಸರ್ವರು ನಮ್ಮವರು ಎನ್ನುವ ಭಾವ ಅವರದ್ದಾಗಿತ್ತು. ಎನಗಿಂತ ಕಿರಿಯರಿಲ್ಲ.. ಶಿವ ಭಕ್ತರಿಗಿಂತ ಹಿರಿಯರಿಲ್ಲ ಎನ್ನುವ ಅವರ ವಚನದ ಸಾಲು ಅವರ ಬದುಕಿನ ಸತ್ಯ ತೋರಿಸಿಕೊಡುತ್ತದೆ. ಸೇಡಂನಲ್ಲಿ ವೈಭವದಿಂದ ಜಯಂತಿ ಆಚರಿಸಿದ್ದು ಅತೀವ ಸಂತಸ ತಂದಿದ್ದು, ಇದರೊಟ್ಟಿಗೆ ಅವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶಿವಶAಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು ಸಾನ್ನಿಧ್ಯ, ಹಾಲಪ್ಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ, ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ, ತೊಟ್ನಳಿಯ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯರು, ಮಳಖೇಡದ ಶ್ರೀ ಕೊಟ್ಟುರೇಶ್ವರ ಶಿವಾಚಾರ್ಯರು, ಸುಲೇಪೇಟದ ಶ್ರೀ ಗುರು ಖಠವಾಂಗೇಶ್ವರ ಸ್ವಾಮೀಜಿ, ರಾಯಕೋಡದ ಶ್ರೀ ರೇವಣಸಿದ್ಧ ಶಿವಾಚಾರ್ಯರು, ಗುಂಡೇಪಲ್ಲಿಯ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು, ಕೋಡ್ಲಾದ ಶ್ರೀ ರವಿ ಸ್ವಾಮೀಜಿ, ಬೆನಕನಹಳ್ಳಿಯ ಶ್ರೀ ಕೇದಾರಲಿಂಗಯ್ಯ ಸ್ವಾಮೀಜಿ, ಯರಗೋಳದ ಶ್ರೀ ಸಂಗಮೇಶ ಸ್ವಾಮೀಜಿ ಸಮ್ಮುಖ ಹಾಗೂ ಶರಣಬಸವೇಶ್ವರ ಸಂಸ್ಥಾನದ ಶ್ರೀ ಲಿಂಗರಾಜಪ್ಪ ಅಪ್ಪ ಅಧ್ಯಕ್ಷತೆವಹಿಸಿದ್ದರು.
ಉತ್ಸವ ಸಮಿತಿ ತಾಲೂಕು ಸಂಚಾಲಕ ರಾಜಶೇಖರ ನೀಲಂಗಿ ಪ್ರಾಸ್ತಾವಿಕ ಮಾತನಾಡಿದರು. ಕು.ಅಭಿಶ್ರೀ ಪ್ರಾರ್ಥಿಸಿದರು. ಮಹೇಶ ಪಾಟೀಲ್ ಸ್ವಾಗತಿಸಿದರು. ಜಗದೀಶ ಕಡಬಗಾಂವ್, ಶ್ರೀಶೈಲ್ ರುದ್ನೂರ ನಿರೂಪಣೆ ಮಾಡಿದರು. ಭಾಗ್ಯಶ್ರೀ ಮಠಪತಿ ವಂದಿಸಿದರು.
ಉತ್ಸವದ ಪೂರ್ವಭಾವಿಯಾಗಿ ಆಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡ ಸತ್ಕರಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.೮೫ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಬಸವ ಕ್ಲಿನಿಕ್‌ನಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಸೋಮವಾರ, ಮಂಗಳವಾರವೂ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಲಾಭ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆ ಮುಖ್ಯಸ್ಥರು ಮನವಿ ಮಾಡಿದ್ದಾರೆ.
ಮೆರವಣಿಗೆ ವೈಭವ: ಸೇಡಂನಲ್ಲಿ ಬಸವ ಜಯಂತಿ ನಿಮಿತ್ತ ಆಯೋಜಿಸಿದ್ದ ಶ್ರೀ ಬಸವೇಶ್ವರ ಮೂರ್ತಿಯ ವೈಭವದ ಮೆರವಣಿಗೆ ನಡೆಯಿತು. ಕೋರಡಗಿರಿ ಹನುಮಾನ ಮಂದಿರದ ಬಳಿ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ರಾಜ್ಯ ತೋಟಗಾರಿಕೆ ಮಹಾಮಂಡಳಿ ನಿರ್ದೇಶಕ ಬಸವರಾಜ ಪಾಟೀಲ್ ಊಡಗಿ, ಆರೋಗ್ಯ ಇಲಾಖೆ ನಿವೃತ್ತ ರಾಜ್ಯ ನಿರ್ದೇಶಕ ಡಾ.ಓಂಪ್ರಕಾಶ್ ಪಾಟೀಲ್ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಕೇರಳದಿಂದ ಆಗಮಿಸಿದ ಚಂಡೆ ವಾದನ ಮೆರಗು ಹೆಚ್ಚಿಸಿತು. ಸ್ಥಳೀಯ ಹಲಗೆ ವಾದನಕ್ಕೆ ಯುವಕರು ಹುಚ್ಚೆದ್ದು ಕುಣಿದರು. ಪಟ್ಟಣ ಇಡೀ ಬಸವ ಧ್ವಜಗಳಿಂದ ಕಂಗೊಳಿಸಿತು. ಬಸವೇಶ್ವರ ವೃತಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು. ಕೊತ್ತಲ ಬಸವೇಶ್ವರ ದೇವಾಲಯದವರೆಗೆ ಭವ್ಯ ಮೆರವಣಿಗೆ ಸಾಗಿತು.