ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಠಾಣಾ ವ್ಯಾಪ್ತಿಯಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ಕಠಿಣ ಕಾರಾಗೃಹ ಶಿಕ್ಷೆ ಮತ್ತು 57 ಸಾವಿರ ರೂ. ದಂಡ ವಿಧಿಸಲಾಗಿದೆ.
ತೀರ್ಥಹಳ್ಳಿ ತಾಲೂಕಿನ 37 ವರ್ಷದ ವ್ಯಕ್ತಿಯು 2019ರಲ್ಲಿ 26 ವರ್ಷದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಸಂತ್ರಸ್ತೆ ತಾಯಿ ಆಗುಂಬೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖಾಧಿಕಾರಿಯಾಗಿದ್ದ ತೀರ್ಥಹಳ್ಳಿ ವೃತ್ತ ನಿರೀಕ್ಷಕ ಜಿ.ವಿ.ಗಣೇಶಪ್ಪ ಅವರು ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ದೋಷಾರೋಷಣ ಪಟ್ಟಿ ಸಲ್ಲಿಸಿದ್ದರು.
ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎಸ್.ಮಾನು ಅವರು ಲೈಂಗಿಕ ದೌರ್ಜನ್ಯ ವೆಸಗಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲನಾದರೆ ಮತ್ತೆ ಆರು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಶಾಂತರಾಜ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.