ಜಿಲ್ಲೆ

ಹಾನಗಲ್ಲನಲ್ಲಿ ಹೊಲಿಗೆ ಯಂತ್ರ ವಿತರಣೆ ಆ. 12ರಂದು

Haveri - Desk - Ganapati Bhat

ಹಾನಗಲ್ಲ: ಕುಟುಂಬದ ಆರ್ಥಿಕ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಹಿಳೆಯರು ಕೂಡ ಆದಾಯದ ಮೂಲ ಕಂಡುಕೊಳ್ಳಲಿ ಎಂಬ ಉದ್ದೇಶದಿಂದ ತರಬೇತಿ ಪಡೆದ ತಾಲೂಕಿನ 500 ಮಹಿಳೆಯರಿಗೆ ಆ. 12ರಂದು ಹೊಲಿಗೆ ಯಂತ್ರ ವಿತರಿಸಲಾಗುವುದು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಅಕ್ಕಿಆಲೂರಿನಲ್ಲಿ ಭಾಗ್ಯೋದಯ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಆರ್ಥಿಕ ನಿರ್ವಹಣೆಯಲ್ಲಿ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ಅವರ ಆದಾಯದ ಹಣ ಮಕ್ಕಳ ಶಿಕ್ಷಣ, ಕುಟುಂಬ ಸದಸ್ಯರ ಆರೋಗ್ಯದ ರಕ್ಷಣೆಗೆ ಸದ್ಬಳಕೆಯಾಗುತ್ತದೆ. ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರನ್ನಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಚುನಾವಣೆ ಪೂರ್ವದಲ್ಲಿ ತಾಲೂಕಿನ 530 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಗಿತ್ತು. ಇದೀಗ ಮತ್ತೆ 2ನೇ ಹಂತದಲ್ಲಿ 500 ಮಹಿಳೆಯರಿಗೆ ಯಂತ್ರ ವಿತರಣೆಗೆ ಆಯ್ಕೆ ಮಾಡಲಾಗಿದೆ ಎಂದರು.

ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ ಮಾತನಾಡಿದರು.

ತರಬೇತಿ ಕೇಂದ್ರದ ಗೀತಾ ಪೂಜಾರ, ಗ್ರಾಪಂ ಅಧ್ಯಕ್ಷ ಮಕ್ಬೂಲಅಹ್ಮದ್ ರುಸ್ತುಂಖಾನವರ, ಉಪಾಧ್ಯಕ್ಷೆ ಶೇಕವ್ವ ತಳವಾರ, ಎಲ್.ಕೆ. ಶೇಷಗಿರಿ, ಅನಿತಾ ಶಿವೂರ, ಉದ್ಯಮಿ ಸದಾಶಿವ ಬೆಲ್ಲದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೊರಣ್ಣನವರ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವು ತಳವಾರ, ರಜಿಯಾಬೇಗಂ ಹಿತ್ತಲಮನಿ, ಚಂದ್ರಶೇಖರ ಗೂಳಿ, ಸುಮಾ ಸುಣಗಾರ, ಬಸವರಾಜ ಹಾಲಭಾವಿ, ಮಹಾಂತೇಶ ಕುಳೇನೂರ, ಫಕೀರಗೌಡ ಪಾಟೀಲ ಇದ್ದರು.