ತಿ.ನರಸೀಪುರ: ತಾಲೂಕಿನ ಸುಜ್ಜಲೂರು ಗ್ರಾಮದಲ್ಲಿ ಮುಂದಕ್ಕೆ ಹರಿದು ಹೋಗಲು ಸ್ಥಳಾವಕಾಶವಿಲ್ಲದೆ ಚರಂಡಿಗಳಲ್ಲಿ ಜಿಡ್ಡುಗಟ್ಟಿ ನಿಲ್ಲುತ್ತಿರುವ ತ್ಯಾಜ್ಯ ನೀರಿಗೆ ಮುಕ್ತಿ ನೀಡುವಂತೆ ಕ್ಷೇತ್ರದ ಶಾಸಕರಾದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಗ್ರಾಮಸ್ಥರು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಗುರುವಾರ ಕರೋಹಟ್ಟಿ ಗ್ರಾಮದಲ್ಲಿ ಮನವಿ ಸಲ್ಲಿಸಿದರು.
ಗ್ರಾಮಕ್ಕೆ ಸಮರ್ಪಕ ರಸ್ತೆ, ಚರಂಡಿ, ಸ್ಮಶಾನ ರಸ್ತೆ ಹಾಗೂ ಕುಡಿಯುವ ನೀರು ವಿಷಯವಾಗಿ ಹಲವು ವರ್ಷಗಳಿಂದ ದಸಂಸ ಹೋರಾಟ ನಡೆಸುತ್ತಿದ್ದು, ಕ್ರಮ ವಹಿಸದ ತಾಲೂಕು ಆಡಳಿತದ ನಡೆ ವಿರುದ್ಧ ನೂರಾರು ಗ್ರಾಮಸ್ಥರು ಕ್ಷೇತ್ರ ಪ್ರವಾಸ ಕೈಗೊಂಡು ಸಚಿವರ ಗಮನ ಸೆಳೆದರು.
ದಸಂಸ ಜಿಲ್ಲಾ ಸಂಚಾಲಕ ಆಳಗೂಡು ಶಿವಕುಮಾರ್ ಮಾತನಾಡಿ, ಸುಜ್ಜಲೂರು ಗ್ರಾಮದಲ್ಲಿನ ಚರಂಡಿಗಳು ದಲಿತರ ಕಾಲಿಯಲ್ಲಿಯೇ ಅಂತ್ಯಗೊಳ್ಳುವುದರಿಂದ ಇಡೀ ಊರಿನ ತ್ಯಾಜ್ಯ ನೀರೆಲ್ಲವೂ ಜಿಡ್ಡುಗಟ್ಟಿ ನಿಲ್ಲುತ್ತಿದೆ. ಮಳೆಗಾಲದಲ್ಲಿ ನಿತ್ಯವೂ ಮಳೆ ಸುರಿಯುವುದರಿಂದ, ಮಳೆ ನೀರಿನೊಂದಿಗೆ ಬೆರೆತು ಮನೆಗಳಿಗೆ ನುಗ್ಗುತ್ತಿದೆ. ಜಿಡ್ಡುಗಟ್ಟಿ ನಿಲ್ಲುವ ತ್ಯಾಜ್ಯದ ಕೊಳೆತ ವಾಸನೆ ಹಾಗೂ ಕೀಟಗಳ ಉಪಟಳಕ್ಕೆ ನಿವಾಸಿಗಳ ಬದುಕು ದುಸ್ತರವಾಗುತ್ತಿದೆ. ಹಾಗಾಗಿ ಸಚಿವರು ತುರ್ತು ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿ, ಚರಂಡಿ ನೀರು ಸರಾಗವಾಗಿ ಮುಂದಕ್ಕೆ ಹರಿದು ಹೋಗಲು ಅಗತ್ಯ ನಿವೇಶನ ಸ್ವಾಧೀನಕ್ಕೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.
ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಉಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಬಸವರಾಜು, ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್, ತಾಪಂ ಇಒ ಪಿ.ಎಸ್.ಅನಂತರಾಜು, ಪಿಡಿಒ ಸೋಲೋಮನ್ ರಾಜ್, ಮುಖಂಡ ಸುಜ್ಜಲೂರು ಗುರುಮಲ್ಲಪ್ಪ, ಗ್ರಾಮದ ಮುಖಂಡ ಬಸವಯ್ಯ, ಗ್ರಾಪಂ ಮಾಜಿ ಸದಸ್ಯರಾದ ಶಿವಯ್ಯ, ಕೃಷ್ಣ, ಮಹದೇವಯ್ಯ, ಮಹೇಶ, ಸಿದ್ದರಾಜು, ನಂಜಯ್ಯ, ಸಿದ್ದೇಶ, ದೊರೆಸ್ವಾಮಿ, ಪುಟ್ಟಯ್ಯ, ಶಿವಣ್ಣ, ಮನಿಯಮ್ಮ, ಸಾಕಮ್ಮ, ಮಹದೇವಮ್ಮ ಇತರರಿದ್ದರು.