ಜಿಲ್ಲೆ

ಕೆ.ಆರ್.ನಗರದದಲ್ಲಿ ಅರ್ಧಕ್ಕೆ ನಿಂತ ಚರಂಡಿ ಕಾಮಗಾರಿ

ಲೋಕೇಶ್ ಮನು. ಡಿ

ಕೆ.ಆರ್.ನಗರ: ಎರಡು ರಸ್ತೆಗಳು ಸೇರುವ ಜಾಗದಲ್ಲಿ ಚರಂಡಿ ದುರಸ್ತಿಗಾಗಿ, ಹಿಂದೆ ನಿರ್ಮಿಸಿದ್ದ ಸ್ಲಾೃಬ್‌ಗಳನ್ನು ತೆರವುಗೊಳಿಸಿ ವರ್ಷವೇ ಸಮೀಪಿಸುತ್ತಿದ್ದರೂ ಹೊಸ ಡೆಕ್ ಅಳವಡಿಸದೆ ಪರಸಭೆ ನಿರ್ಲಕ್ಷೃ ವಹಿಸಿರುವ ಕಾರಣ ಜನ-ಜಾನುವಾರು ಸಂಚಾರಕ್ಕೆ ಅಡ್ಡಿ ಉಂಟಾಗಿದೆ.


ಪಟ್ಟಣದ 10ನೇ ವಾರ್ಡ್‌ನ ಆಂಜನೇಯ ಬಡಾವಣೆಯ ಸಾಯಿಬಾಬಾ ದೇವಸ್ಥಾನದ ಮುಂಭಾಗ ಹಾದು ಹೋಗಿರುವ ಬಜಾರ್ ರಸ್ತೆಯ ಚರಂಡಿ ಸ್ಲಾೃಬ್‌ಗಳು ಶಿಥಿಲಗೊಂಡಿದ್ದವು. ಈ ಬಗ್ಗೆ ಸ್ಥಳೀಯರು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಹಾಗಾಗಿ, ಪುರಸಭೆ ನೂತನವಾಗಿ ನಿರ್ಮಿಸುವ ಸಲುವಾಗಿ ಟೆಂಡರ್ ನೀಡಿತ್ತು. ಗುತ್ತಿಗೆದಾರರು ಆ ಚರಂಡಿಗೆ ಅಳವಡಿಸಿದ್ದ ಹಳೆಯ ಸ್ಲಾೃಬ್‌ಗಳನ್ನು ತೆರವುಗೊಳಿಸಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದರು. ಈ ನಿಟ್ಟಿನಲ್ಲಿ ಚರಂಡಿಯ ಎರಡು ಬದಿ ಕಾಂಕ್ರೀಟ್ ಗೋಡೆ ಕಟ್ಟಿದರು. ಬಳಿಕ ಚರಂಡಿಗೆ ಡೆಕ್ ನಿರ್ಮಿಸದೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದು, ವರ್ಷವೇ ಸಮೀಪಿಸುತ್ತಿದೆ.


ಕೆಲಸ ಇಂದು ನಡೆಯುತ್ತದೆ… ನಾಳೆ ನಡೆಯುತ್ತದೆ ಎಂದು ಸ್ಥಳೀಯರು ಕಾದು ಕುಳಿತರು. ಆದರೆ ತಿಂಗಳುಗಳೇ ಕಳೆದರೂ ಕೆಲಸ ಪೂರ್ಣಗೊಳಿಸಿಲ್ಲ. ಅಧಿಕಾರಿಗಳೇ ಆಗಲಿ, ಗುತ್ತಿಗೆದಾರರಾಗಲಿ ಈ ಕಡೆ ಸುಳಿಯಲೇ ಇಲ್ಲ. ಇದನ್ನು ಅರಿತ ನಿವಾಸಿಗಳು ತಾವೇ ಪುರಸಭೆ ಮೆಟ್ಟಿಲು ಹತ್ತಿ ಇಳಿದರು. ಅಧಿಕಾರಿಗಳಿಗೆ ಮಾತ್ರವಲ್ಲದೆ, ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.


ಎರಡು ವಾರ್ಡ್‌ಗಳ ವಿಭಾಗ ರಸ್ತೆ: ಬಜಾರ್ ರಸ್ತೆ ಕೊನೆಯ ಭಾಗ 10 ಮತ್ತು 11ನೇ ವಾರ್ಡ್‌ಗಳೆರಡರ ಸಂಪರ್ಕ ಕೊಂಡಿಯಾಗಿದೆ. ಎಡಭಾಗಕ್ಕೆ 10ನೇ ವಾರ್ಡ್, ಬಲ ಭಾಗಕ್ಕೆ 11ನೇ ವಾರ್ಡ್ ಬರುತ್ತದೆ. ಆದರೆ ಈ ರಸ್ತೆ ಎರಡು ವಾರ್ಡ್‌ಗಳ ಜನತೆಯ ಜತೆಗೆ, ಇತರ ಸಾರ್ವಜನಿಕರಿಗೂ ಸಂಚಾರಕ್ಕೆ ಅನುಕೂಲವಾಗಿದ್ದು, ಈಗ ಚರಂಡಿ ಡೆಕ್ ಇಲ್ಲದೆ ಮಕ್ಕಳು, ವೃದ್ಧರು, ವಾಹನ ಸವಾರರು, ಜಾನುವಾರುಗಳಿಗೂ ಸಂಚರಿಸಲು ಪರದಾಡುವಂತಾಗಿದೆ.


ವಾಹನ ಸವಾರರ ಪರದಾಟ:ಚರಂಡಿಗೆ ಡೆಕ್ ಅಳವಡಿಸದ ಪರಿಣಾಮ ಸಾಯಿಬಾಬಾ ದೇವಸ್ಥಾನ ಅಕ್ಕಪಕ್ಕದ ನಿವಾಸಿಗಳು ವಾಹನಗಳಲ್ಲಿ ಬಜಾರ್ ರಸ್ತೆಗೆ ಬರಬೇಕೆಂದರೆ, ಚಂದ್ರಮೌಳೇಶ್ವರ ರಸ್ತೆಯನ್ನು ಬಳಸಿ ಬರಬೇಕು. ಇಲ್ಲವೇ, ಕಂಠೇನಹಳ್ಳಿ-ಮೈಸೂರು ರಸ್ತೆಯ ಮೂಲಕ ಹಾದು ಬಜಾರ್ ರಸ್ತೆ ತಲುಪುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಅರಿತ ಸ್ಥಳೀಯರಿಬ್ಬರು ಡೆಕ್ ನಿರ್ಮಾಣದ ಜಾಗದಲ್ಲಿ ಚರಂಡಿಗೆ ತಾತ್ಕಾಲಿಕವಾಗಿ ಎರಡು ಚಪ್ಪಡಿ ಅಳವಡಿಸಿದ್ದಾರೆ. ಸದ್ಯ ಚಪ್ಪಡಿಗಳ ಮೇಲೆಯೇ ಆ ಭಾಗದ ಜನ-ಜಾನುವಾರು ಸಂಚರಿಸುವಂತಾಗಿದೆ. ಕಿಲೋ ಮೀಟರ್‌ಗಟ್ಟಲೆ ಬಳಸಬೇಕೆಂಬ ಕಾರಣದಿಂದ ಕೆಲ ದ್ವಿಚಕ್ರ ವಾಹನ ಸವಾರರು ಈ ಚಪ್ಪಡಿಗಳ ಮೇಲೆ ಸಂಚರಿಸಲು ಹೋಗಿ ಆಯತಪ್ಪಿ ಚರಂಡಿಗೆ ಬಿದ್ದು ಗಾಯಗೊಂಡಿರುವ ನಿದರ್ಶನಗಳು ಇವೆ. ಹೀಗಾಗಿ, ನಿತ್ಯ ಇಲ್ಲಿ ಸಂಚರಿಸುವ ಜನರು ಪುರಸಭೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಶಾಪ ಹಾಕುತ್ತಿದ್ದಾರೆ.