ಜಿಲ್ಲೆ

ತ್ಯಾಜ್ಯ ವಿಲೇ ಕೇಂದ್ರದಿಂದ ದುರ್ವಾಸನೆ : ಕೊಳಚೆ ನೀರು ರಸ್ತೆಗೆ, ಗ್ರಾಮಸ್ಥರ ಆಕ್ರೋಶ : ಮೂಲ್ಕಿ ನಗರ ಪಂಚಾಯಿತಿಗೆ ದೂರು

ಮೂಲ್ಕಿ: ಇಲ್ಲಿನ ನಗರ ಪಂಚಾಯಿತಿಯ ಮೆಡಲಿನ್ ಶಾಲೆಯ ಎದುರು ಕಾರ್ಯಾಚರಿಸುತ್ತಿರುವ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಪರಿಸರ ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ. ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ದುರ್ವಾಸನೆಯ ತೀವ್ರತೆಗೆ ಉಸಿರು ಬಿಗಿ ಹಿಡಿದು ನಡೆಯುವ ಸ್ಥಿತಿ ಉದ್ಭವವಾಗಿದೆ. ರೋಗಗಳ ಭೀತಿಯೂ ಎದುರಾಗಿದೆ ಎಂದಿರುವ ವಾನಂಪಾಡಿ ಗ್ರಾಮಸ್ಥರು ಮೂಲ್ಕಿ ನಗರ ಪಂಚಾಯಿತಿಗೆ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮೂಲ್ಕಿ ನ.ಪಂ. ಅಧ್ಯಕ್ಷ ಸತೀಶ್ ಅಂಚನ್ ವಾತನಾಡಿ, ಮೂಲ್ಕಿ ನಗರ ಪಂಚಾಯಿತಿಯ 11 ವಾರ್ಡ್‌ಗಳ ಕಸ ಇದೇ ಡಂಪಿಂಗ್ ಯಾರ್ಡ್‌ನಲ್ಲಿ ವಿಲೇವಾರಿಯಾಗುತ್ತಿದ್ದು, ಹಸಿಕಸ, ಒಣಕಸ ಬೇರ್ಪಡಿಸಲು ಗ್ರಾಮಸ್ಥರು ಸಹಕರಿಸದೆ ಸಮಸ್ಯೆಯಾಗಿದೆ. ಅಲ್ಲದೆ ಹಲವು ವರ್ಷಗಳ ಹಿಂದೆ ಡಂಪಿಂಗ್ ಯಾರ್ಡ್‌ನಲ್ಲಿ ಹಾಕಿರುವ ಕಸದ ರಾಶಿ ಇನ್ನೂ ವಿಲೇವಾರಿಯಾಗಿಲ್ಲ ಹಾಗೂ ನಗರ ಪಂಚಾಯಿತಿಯಲ್ಲಿ ಅನುದಾನದ ಕೊರತೆ ಇದ್ದು, ಈ ಬಗ್ಗೆ ಕೂಡಲೇ ಗಮನ ಹರಿಸಿ ಕಸ ತ್ಯಾಜ್ಯ ವಿಲೇವಾರಿಗೆ ಪ್ರಯತ್ನಿಸಲಾಗುವುದು ಎಂದರು.

ಕಸದ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಮುಖ್ಯಾಧಿಕಾರಿ ಮಧುಕರ್ ವಾತನಾಡಿ, ಡಂಪಿಂಗ್ ಯಾರ್ಡ್ ಒಳಗೆ ಚರಂಡಿ ಬ್ಲಾಕ್ ಆಗಿರುವ ಸಾಧ್ಯತೆ ಇದ್ದು, ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸುವಂತೆ ಅಧ್ಯಕ್ಷರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಮೂಲ್ಕಿ ನ.ಪಂ. ಸದಸ್ಯ ಪುತ್ತು ಬಾವ, ಸುಭಾಷ್ ಶೆಟ್ಟಿ, ಆರೋಗ್ಯಾಧಿಕಾರಿ ಶಶಿರೇಖಾ,ಮೂಲ್ಕಿ ಗೌಡ ಸಾರಸ್ವತ ಬ್ರಾಹ್ಮಣ ಸಭಾದ ಅಧ್ಯಕ್ಷ ಸತ್ಯೇಂದ್ರ ಶೆಣೈ, ಶಿವಾನಂದ ಪ್ರಭು, ಸವಿತಾ ಬಾಳಿಗ, ವಿಶ್ವನಾಥ ಶೆಣೈ ಮತ್ತಿತರರಿದ್ದರು.