ಮುದ್ದೇಬಿಹಾಳ ತಾಲೂಕಿನ ಕೋಳೂರು ಗ್ರಾಮದ ಪರಿಶಿಷ್ಟರ ಕಾಲನಿಯಲ್ಲಿ ಹದಗೆಟ್ಟ ರಸ್ತೆ. 
ಜಿಲ್ಲೆ

ಕೋಳೂರು ಗ್ರಾಮದಲ್ಲಿ ಕೊಳಚೆ ಸಮಸ್ಯೆ

ಗಿರೀಶ ಸಗರ

ಮುದ್ದೇಬಿಹಾಳ: ತಾಲೂಕಿನ ಕೋಳೂರು ಗ್ರಾಮದಲ್ಲಿ ಪರಿಶಿಷ್ಟರ ಕಾಲನಿ ಪಕ್ಕದಿಂದ ಯರಗಲ್​, ಮದರಿ, ಬಾಲಾಜಿ ಸಕ್ಕರೆ ಕಾರ್ಖಾನೆಗೆ ಹೋಗಿ ಬರುವ ಏಕೈಕ ರಸ್ತೆ ಕೊಳಚೆ ನೀರಿನಿಂದ ಆವೃತವಾಗಿ ಸಂಚಾರಕ್ಕೆ ಸಂಚಕಾರ ತಂದಿದೆ. ಅಕ್ಕಪಕ್ಕದ ನಿವಾಸಿಗಳಿಗೂ ಸಮಸ್ಯೆಯಾಗಿದೆ.

ನಿತ್ಯವೂ ವಿದ್ಯಾರ್ಥಿಗಳು, ಜನರು ರಾಡಿ ನೀರಿನಲ್ಲಿಯೇ ಸಂಚರಿಸುವ ಅನಿವಾರ್ಯತೆ ಉಂಟಾಗಿದೆ. ಪಂಚಾಯಿತಿ ಕಚೇರಿ ಗ್ರಾಮದ ಕೇಂದ್ರ ಸ್ಥಾನವಾಗಿದ್ದರೂ ಅದರ ರಸ್ತೆ ಸುಧಾರಣೆಗೆ ಮುಂದಾಗದಿರುವುದು, ರಸ್ತೆಯ ಎರಡೂ ಬದಿ ಚರಂಡಿ ನಿರ್ಮಿಸಿ ಕೊಳಚೆ ನೀರನ್ನು ತಡೆಯಲು ಯತ್ನಿಸದಿರುವುದು ಗ್ರಾಪಂ ಆಡಳಿತದ ರ್ನಿಲಕ್ಷಕ್ಕೆ ಕನ್ನಡಿ ಹಿಡಿದಂತಾಗಿದೆ ಎಂದು ಪರಿಶಿಷ್ಟರ ಕಾಲನಿಯ ನಿವಾಸಿಗಳು, ಜನರು ದೂರಿದ್ದಾರೆ.

ಕೂಡಲೇ ಗ್ರಾಪಂನವರು ರಸ್ತೆ ಸುಧಾರಣೆ, ಚರಂಡಿ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡದಿದ್ದರೆ ಗ್ರಾಪಂ, ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ನಿವಾಸಿಗಳು ಎಚ್ಚರಿಸಿದ್ದಾರೆ.

ಕೆಲವರು ಚರಂಡಿಯೊಳಗೆ ಗರಸು ಮಣ್ಣು ಹಾಕಿದ್ದರಿಂದ ಕೊಳಚೆ ನೀರು ಹರಿದು ಹೋಗದೆ ಸಮಸ್ಯೆಯಾಗಿದೆ. 2&3 ಬಾರಿ ಸ್ಥಳ ಪರಿಶೀಲಿಸಿದ್ದೇನೆ. ಜೆಸಿಬಿಯಿಂದ ಸ್ವಚ್ಛಗೊಳಿಸಲು ಆಗಲ್ಲ. ಚರಂಡಿಯೊಳಗೆ ವಿಷ ಸರ್ಪ ಹೋಗಿದ್ದರಿಂದ ಕಾರ್ಮಿಕರು ಕೆಲಸ ಮಾಡಲು ಒಲ್ಲೆ ಎನ್ನುತ್ತಿದ್ದಾರೆ. ಕೂಡಲೇ ಪರ್ಯಾಯ ವ್ಯವಸ್ಥೆ ಮೂಲಕ ರಸ್ತೆ ಮೇಲೆ ನೀರು ಹರಿಯದಂತೆ ಕ್ರಮ ವಹಿಸುತ್ತೇನೆ. > ವಿಜಯಾ ಮುದಗಲ್​, ಪಿಡಿಒ, ಕೊಳೂರು ಗ್ರಾಪಂ