ಜಿಲ್ಲೆ

ಕೊಳಚೆ ನೀರಿನಿಂದಾಗಿ ಲೆಕ್ಕವಿಲ್ಲದಷ್ಟು ಮೀನು ಸಾವು: ದುರ್ವಾಸನೆಯಿಂದ ಸಾರ್ವಜನಿಕರಿಗೂ ಸಮಸ್ಯೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಭೀಕರ ಬರಗಾಲದ ಜತೆಗೆ ಕೊಳಚೆ ನೀರಿನಿಂದಾಗಿ  ನಗರಕ್ಕೆ ಹೊಂದಿಕೊಂಡಂತಿರುವ ಗುತ್ತಲು-ಯತ್ತಗದಹಳ್ಳಿ ಕೆರೆಯಲ್ಲಿ ಲೆಕ್ಕವಿಲ್ಲದಷ್ಟು ಮೀನುಗಳು ಸಾವನ್ನಪ್ಪಿವೆ. ಪರಿಣಾಮ ಕಳೆದ ನಾಲ್ಕು ದಿನದಿಂದ ಕೆಟ್ಟವಾಸನೆ ಸಾರ್ವಜನಿಕರ ನಿದ್ದೆಗೆಡಿಸಿದೆ.

ಯಾವುದೇ ವಿಷಪ್ರಾಶನ ನಡೆಯದಿದ್ದರೂ ಸಹ ನಗರದ ಒಳಚರಂಡಿಯ ಕಲ್ಮಶ ನೀರನ್ನು ಕೆರೆಗೆ ಬಿಡುತ್ತಿರುವುದು ನೀರು ಕಲುಷಿತಗೊಂಡಿದೆ. ಇದರಿಂದ ಮೀನುಗಳ ಮಾರಣ ಹೋಮವೇ ನಡೆದಿದೆ. 242 ಎಕರೆ ಪ್ರದೇಶದಲ್ಲಿರುವ ಗುತ್ತಲು-ಯತ್ತಗದಹಳ್ಳಿ ಕೆರೆಯು ಯತ್ತಗದಹಳ್ಳಿ ಗ್ರಾಮ ವ್ಯಾಪ್ತಿಯಲ್ಲೇ ಹೆಚ್ಚು ವಿಸ್ತೀರ್ಣ ಹೊಂದಿದೆ. ಇದು ನಗರಕ್ಕೆ ಹೊಂದಿಕೊಂಡಂತಿರುವುದರಿಂದ ಜಿಲ್ಲಾಸ್ಪತ್ರೆಯ ಒಳಚರಂಡಿ ಮತ್ತು ಕಲುಷಿತ ನೀರು ಸೇರಿದಂತೆ ವಿವಿಧ ಬಡಾವಣೆಗಳ ಕಲ್ಮಶಯುಕ್ತ ನೀರೆಲ್ಲವೂ ಕೆರೆ ಸೇರುತ್ತಿದೆ.

ಈ ಮೊದಲು ಕೆರೆಯ ಪಕ್ಕದಲ್ಲೇ ಒಳಚರಂಡಿ ನೀರಿನ ಶುದ್ದೀಕರಣ ಘಟಕ ಸ್ಥಾಪಿಸಲಾಗಿತ್ತು. ಆದರೆ, ಇದು ಹೆಚ್ಚು ದಿನ ಕಾರ್ಯನಿರ್ವಹಿಸಿಲ್ಲ. ಪರಿಣಾಮ ಕಲುಷಿತ ನೀರು ನೇರವಾಗಿ ಕೆರೆ ಒಡಲು ಸೇರುತ್ತಿದೆ. ಪರಿಣಾಮ ಕೆರೆಯ ನೀರೆಲ್ಲವೂ ಹಸಿರು ಬಣ್ಣಕ್ಕೆ ತಿರುಗಿತ್ತು. ಇದೇ ನೀರನ್ನು ಕೃಷಿ ಚಟುವಟಿಕೆಗಳಿಗೆ, ದನ ಕರುಗಳ ಕುಡಿಯುವ ನೀರಿಗಾಗಿ ಬಳಸಲಾಗುತ್ತಿತ್ತು.

ಆದರೆ, ಈ ನೀರನ್ನು ಸೇವಿಸಿದ ರಾಸುಗಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ಜಾನುವಾರುಗಳಿಗೆ ಕೆರೆ ನೀರು ಕುಡಿಸುವುದನ್ನು ಜನರು ಸ್ಥಗಿತಗೊಳಿಸಿದ್ದರು. ಈ ಮಧ್ಯೆ ಕೃಷಿಗಷ್ಟೇ ಬಳಸಲಾಗುತ್ತಿತ್ತು. ಪ್ರಸ್ತುತ ಬರಗಾಲ ಆವರಿಸಿರುವುದರಿಂದ ಕೆರೆಯ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಆದರೆ, ಕೊಳಚೆ ನೀರು ಕೆರೆ ಸೇರುತ್ತಿರುವುದರಿಂದ ಇರುವ ನೀರೆಲ್ಲವೂ ಕಲುಷಿತಗೊಂಡಿದೆ. ಪರಿಣಮ ಮೀನು ಮೃತಪಟ್ಟಿವೆ. ಇದರಿಂದ ಕೆರೆಯಿಂದ ಕೆಟ್ಟ ದುರ್ವಾಸನೆ ಬರುತ್ತಿದ್ದು, ಇದು ೨-೩ಕಿ.ಮೀ. ದೂರದವರೆವಿಗೂ ಹಬ್ಬಿದೆ. ಕೆರೆ ಸಮೀಪದ ಮನೆಗಳಲ್ಲಿ ವಾಸವಿರುವ ಜನರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆರೆಯ ಅಕ್ಕಪಕ್ಕದ ಬೋರ್‌ವೆಲ್‌ಗಳ ನೀರು ಕೂಡ ಕೆಟ್ಟ ವಾಸನೆಯಿಂದ ಕೂಡಿದ್ದು, ಜನರು ಅದನ್ನು ಕುಡಿಯಲು ಹಿಂದೇಟು ಹಾಕುತ್ತಿದ್ದಾರೆ

ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಬಾಬಾಸಾಬ್, ಕೆರೆಯ ನೀರು ಬಹುತೇಕ ಖಾಲಿಯಾಗಿದೆ. ಮಾತ್ರವಲ್ಲದೆ ವಾತಾವರಣದಲ್ಲಿನ ಉಷ್ಣಾಂಶ ಏರಿಕೆಯಿಂದಾಗಿ ಮೀನುಗಳು ಮೃತಪಟ್ಟಿವೆ. ಈ ಬಗ್ಗೆ ವರದಿ ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದಿದ್ದಾರೆ.